Saturday 26 September 2015

ಹಣತೆ


ಜಿ.ಎಸ್.ಶಿವರುದ್ರಪ್ಪ
ಹಣತೆ ಹಚ್ಚುತ್ತೇನೆ ನಾನೂ
ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ;
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಮೆ ನನಗಿಲ್ಲ

ಹಣತೆ ಹಚ್ಚುತ್ತೇನೆ ನಾನೂ;
ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ
ಆಸೆಯಿಂದಲ್ಲ.
ಕತ್ತಲಿನಿಂದ ಕತ್ತಲೆಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ
ಶತಮಾನದಿಂದಲೂ,

ನಡುನಡುವೆ ಒಂದಷ್ಟು ಬೆಳಕು ಬೇಕೆಂದು
ಆಗಾಗ ಕಡ್ಡಿ ಗೀಚಿದ್ದೇವೆ,
ದೀಪ ಮೂಡಿಸಿದ್ದೇವೆ,
ವೇದ,ಶಾಸ್ತ್ರ,ಪುರಾಣ,ಇತಿಹಾಸ,ಕಾವ್ಯ,ವಿಜ್ಞಾನಗಳ
ಮತಾಪು-ಪಟಾಕಿ-ಸುರು ಸುರುಬತ್ತಿ-ಹೂ ಬಾಣ
ಸುಟ್ಟಿದ್ದೇವೆ.
'ತಮಸೋಮ ಜ್ಯೋತಿರ್ಗಮಯ' ಎನ್ನುತ್ತಾ ಬರೀ
ಬೂದಿಯನ್ನೇ ಕೊನೆಗೆ ಕಂಡಿದ್ದೇವೆ

ನನಗೂ ಗೊತ್ತು,ಈ ಕತ್ತಲಿಗೆ
ಕೊನೆಯಿರದ ಬಾಯಾರಿಕೆ.
ಎಷ್ಟೊಂದು ಬೆಳಕನ್ನು ಇದು ಉಟ್ಟರೂ,ತೊಟ್ಟರೂ
ತಿಂದರೂ,ಕುಡಿದರೂ ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನು ಬಯಕೆ

ಆದರೂ ಹಣತೆ ಹಚ್ಚುತ್ತೇನೆ ನಾನೂ;
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು,ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ
ಹಣತೆ ಬೇಗ ಆರಿದ ಮೇಲೆ,ನೀನು ಯಾರೋ, ಮತ್ತೆ
ನಾನು ಯಾರೋ.
                     

         
                                                    

                                                       ************

  { ವಾಸ್ತವತೆಯನ್ನು ಪ್ರತಿಪಾದಿಸುವ ಈ ಕವಿತೆ ನಮ್ಮ ಪಠ್ಯದಲ್ಲಿದೆ. ಇದನ್ನು ಓದಿದ ನಂತರ ಯಾಕೋ ಬಹಳ ಕಾಡತೊಡಗಿತು,ಹಂಚಿಕೊಳ್ಳಬೇಕೆನಿಸಿತು. . }

Tuesday 22 September 2015

ಬರೆಯುವುದೇಕೆ???

ಬರೆಯುವುದೇಕೆ???

       
     ಹೌದು,ನಾನೇಕೆ ಬರೆಯಬೇಕು?
 ನಾವು ಬೆಳೆಯುತ್ತಾ ಹೋದಂತೆ ಜ್ಞಾನವನ್ನೂ , ಗತಿಸಿದ ಕಾಲದಿಂದ ಅನುಭವಗಳನ್ನೂ ಪಡೆಯುತ್ತಿರುತ್ತೇವೆ.ಇದೊಂದು ನಿರಂತರ ಪ್ರಕ್ರಿಯೆ.ಹೀಗೆ ಬೆಳೆಯುವ ವ್ಯಕ್ತಿತ್ವದ ಮಾಪನವನ್ನು ಹಾಗೂ ಬದಲಾದ ಅಥವಾ ಬದಲಾಗುವ ಮಾನಸಿಕತೆಯ ತೋರ್ಪಡಿಕೆಯನ್ನು ನಮ್ಮ ಬರವಣಿಗೆಯಲ್ಲೂ ಕಾಣಬಹುದು.
              ಇದೇ ಮಾಧ್ಯಮವನ್ನು ಬಳಸಿಕೊಂಡು ಗತಿಸಿದ ಕಾಲಕ್ಕೆ ಬಣ್ಣ ಹಚ್ಚಿ, 'ಅಲಂಕರಿಸಿ' ತಂದು ಕೂರಿಸುವ ಯತ್ನ ಇದು.  ಇದರೊಂದಿಗೆ ಕನಸುಗಳನ್ನೂ,ಕಲ್ಪನೆಗಳನ್ನೂ ...! ಯಾವ ರೂಪದಲ್ಲಿ...?ಕತೆಯೋ,ಕವಿತೆಯೋ,ಪ್ರಬಂಧವೋ,ಚುಟುಕೋ...ಇಂಥದ್ದೇ ಪ್ರಕಾರದಲ್ಲಿ ಬರೆಯಬೇಕೆಂಬ ನಿರ್ದಿಷ್ಟತೆಯ ಬಗ್ಗೆ ಇನ್ನೂ ಯೋಚಿಸಿಲ್ಲವಾದ್ದರಿಂದ ಯಾವ ರೂಪದಲ್ಲೂ ಇದ್ದೀತು...ನೆಚ್ಚಿನ ಮತ್ತೊಂದು ಮಾಧ್ಯಮವಾದ ಛಾಯಾಚಿತ್ರವೂ ಸೇರಿದಂತೆ!
               ಇಲ್ಲಿ ರೂಪುಗೊಳ್ಳುವ ಎಲ್ಲವೂ ಆಯಾ ಕ್ಷಣಗಳಲ್ಲಿ ನಾನಿದ್ದ ಮನಸ್ಥಿತಿಯ ರೂಪ.ಅದೇ ಮನಸ್ಥಿತಿ ನನ್ನ ಬದುಕಿನಲ್ಲಿ ಶಾಶ್ವತವೆಂದು ಹೇಳಲಾರೆ.ಆದರೆ ಆ ಸಮಯದಲ್ಲಿ ನಾನು ಅನುಭವಿಸಿದ ಭಾವ ಮತ್ತು ಅದರಿಂದ ಕಲಿತ ಪಾಠ ಅವುಗಳು ಮಾತ್ರ ಸತ್ಯವಾದದ್ದು.
              ಹೀಗೆ ಜೀವನ ಪಾಠಗಳ ಕಲಿಕೆ ಸಾಗುತ್ತಲೇ ಇರುವುದರಿಂದ ಯಾವುದಾದರೂ ಒಂದು ನಿರ್ದಿಷ್ಟ ತತ್ವಕ್ಕೆ ನಾನು ಬಧ್ಧ ಎಂದು ಹೇಳಲಾರೆ.ಬದಲಾವಣೆ ಅನ್ನುವಂಥದ್ದು ಬಾಹ್ಯದೊಂದಿಗೆ ಆಂತರ್ಯದಲ್ಲೂ ನಡೆದರೆ ಸೊಗಸಲ್ಲವೇ..?
               ಇನ್ನು ಎಲ್ಲರಂತೆ ಭವಿಷ್ಯದ ಬಗೆಗೂ ನೂರಾರು ಕನಸುಗಳಿವೆ.ಅವುಗಳನ್ನು ಹಂಚಿಕೊಳ್ಳಬೇಕೆಂಬ ಮನಸ್ಸೂ ಇದೆ.ಅದಕ್ಕೆ ಪ್ರಬಲವಾದ ಒಂದು ಮಾಧ್ಯಮವಾಗಿ ಬರವಣಿಗೆ ನಿಲ್ಲಬಲ್ಲದು ಎಂಬ ನಂಬಿಕೆ ನನ್ನದು. ಈ ದೀರ್ಘ ಪಯಣದಲ್ಲಿ ನೀವೆಲ್ಲಾ ನನ್ನ ಜೊತೆಗೆ ಸಾಗುತ್ತೀರೆಂಬ ನಂಬಿಕೆಯೊಂದಿಗೆ,
                                                         -ಶಿವಪ್ರಸಾದ್ ಹಳುವಳ್ಳಿ...