Sunday 29 May 2016

ಏಕತಾರಿ

       

      "ಯಾಕೋ ಹಾಗೆ ಹೇಳ್ತೀಯಾ,ಸುಮ್ನೆ ಕೂತ್ಕೊಂಡು ನೋಡ್ತಾ ಇರು.ಆಮೇಲೂ ಏನೂ ಅರ್ಥ ಆಗ್ಲಿಲ್ಲ ಅಂದ್ರೆ..."ನೀನು ವ್ಯರ್ಥವೆಂಬಂತೆ ನೋಡಿದಳು.
     ನಾನು ಮೌನವಾಗಿದ್ದೆ.ಪ್ರೀತಿ ಮಾತನಾಡುವ ಲಹರಿಯಲ್ಲಿದ್ದಳು.ಆಕೆಯೆ ಮಾತಿನ ಚುಂಬಕ ಶಕ್ತಿಗೆ ಮರುಳಾಗದವರಾರು?ನನ್ನನ್ನ್ನು ಭಾವನೆಗಳಿಗೆ ಸ್ಪಂದಿಸುವ ಮನುಷ್ಯನನ್ನಾಗಿ ಮಾಡಿದ್ದೇ ಪ್ರೀತಿ.ಮೂಲತಃ ಮಲೆನಾಡಿನವನಾದ ನನಗೆ ನಿಸರ್ಗವೆಂದರೆ ಅಷ್ಟಕಷ್ಟೇ.ಅಂದರೆ ಪ್ರಕೃತಿ ದ್ವೇಷಿಯಲ್ಲ,ಅದರ ಏಕತಾನತೆ ರೇಜಿಗೆ ಹುಟ್ಟಿಸಿತ್ತಷ್ಟೇ.ಒಂದರ್ಥದಲ್ಲಿ ನಿಸರ್ಗದ ಕೌತುಕತೆಯನ್ನು ಹುಡುಕುವ ಕುತೂಹಲವನ್ನು ಕಳೆದುಕೊಂಡಿದ್ದೆ.ಈ ಭಾವ ದೈನಂದಿನ ಬದುಕಿನಲ್ಲೂ ನನಗರಿವಿಲ್ಲದಂತೆಯೇ ಬೆಳೆದಿತ್ತು.
     ಈಗ್ಗೆ ಎರಡು ತಿಂಗಳ ಕೆಳಗೆ ಪ್ರೀತಿಯ ಪರಿಚಯವಾದದ್ದು.ನಾನು ಸ್ನಾತಕೋತ್ತರ ಪದವಿ ಮುಗಿಸಿ ಸಂಶೋಧನೆಗೆಂದು ಒಬ್ಬರ ಬಳಿ ತೊಡಗಿಸಿಕೊಂಡ ಸಮಯದಲ್ಲೇ ಪ್ರೀತಿಯೂ ಬಂದು ಸೇರಿಕೊಂಡಳು.ಸಮವಯಸ್ಕರೆಂದಿದ್ದದ್ದು ನಾನು ಮತ್ತು ಈಕೆ ಮಾತ್ರ.ಉಳಿದವರೆಲ್ಲ ಹಿರಿಯರಾದ್ದರಿಂದ ಸಹಜವಾಗಿಯೇ ಆಪ್ತರಾದೆವು.ನನಗೆ ಮೊದಲಿನಿಂದಲೂ ಅಂತರ್ಮುಖಿಯಾಗಿದ್ದು ಅಭ್ಯಾಸ.ಇತರರೊಂದಿಗೆ ಭಾವನಾಸ್ತರದಲ್ಲಿ ವ್ಯವಹರಿಸುವುದು ಆಗದ ಮಾತು.ಆದರೆ ಪ್ರೀತಿ ಹಾಗಲ್ಲ.ಎಲ್ಲರೊಂದಿಗೆ ಬೆರೆಯುವ,ಇತರರನ್ನು ಆಕರ್ಷಿಸುವ ಗುಣವನ್ನು ಹೊಂದಿದ್ದಳು.ನಗುವೇ ಆಕೆಯ ಗುಣವನ್ನು ಸೂಚಿಸುತ್ತಿತ್ತು.ಕ್ರಮೇಣ ನನ್ನನ್ನು ಯಾವ ಪರಿ ಆವರಿಸಿದಳೆಂದರೆ,ಎಲ್ಲವನ್ನೂ ನಿಶ್ಚೇತನವಾಗಿ ಕಾಣುತ್ತಿದ್ದ ನನ್ನಲ್ಲಿ ಒಂದು ಚೈತನ್ಯವನ್ನು ತುಂಬಿದಳು.
     "ಪ್ರತೀ ವಸ್ತು,ಜೀವಿ ಎಲ್ಲವಕ್ಕೂ ಆಂತರಿಕ ಮತ್ತು ಬಾಹ್ಯ ಸೌಂದರ್ಯ ಇರತ್ತೆ ಕಣೋ..ಹಾಗೆಯೇ ಒಂದಷ್ಟು ಕೌತುಕವೂ...ಬರೀ ಬಾಹ್ಯ ಸೌಂದರ್ಯಕ್ಕೆ ಸೀಮಿತವಾಗ್ಬೇಡ."ಇಂದಿಗೂ ನೆನಪಿದೆ.ಆಕೆ ಅಂದು ಹೇಳಿದ್ದ ಮಾತುಗಳೇ ನನ್ನ ಬದಲಾವಣೆಗೆ ಹೇತುವಾದದ್ದು.ನನ್ನ ಬದುಕು,ಜೀವನದ ಬಗೆಗಿನ ಒಂದು ದೃಷ್ಟಿಕೋನದಿಂದ ಮತ್ತೊಂದು ಕಡೆಗೆ ಹೊರಳಿತು.ಜೀವನದ ಸೌಂದರ್ಯ ಅರಿವಾಗತೊಡಗಿತು.
     ವಿಹರಿಸಿಕೊಂಡು ಬರೋಣವೆಂದು ಸಂಜೆ ಸಮುದ್ರ ತಟಕ್ಕೆ ಬಂದ ನಮ್ಮ ನಡುವೆ ನಾನೇ ಮಾತು ತೆಗೆದಿದ್ದೆ."ಈ ಸೂರ್ಯಂಗೆ ಬೇಜಾರಾಗಲ್ವ...ದಿನಾಲೂ ಬಂದು ಹೋಗ್ತಾನೆ.ನಂಗಂತೂ ಇವ್ನನ್ನು ನೋಡಿದ್ರೆ ಪಾಪ ಅಂತ ಅನ್ನಿಸುತ್ತೆ."ಹೀಗೆ ಹೇಳಿದ್ದಕ್ಕೇ ಪ್ರೀತಿ ನೀನು ವ್ಯರ್ಥವೆಂಬಂತೆ ನನ್ನನ್ನು ನೋಡಿ ಮೇಲಿನಂತೆ ಹೇಳಿದ್ದು.
     ನನ್ನ ಮನಸ್ಥಿತಿ ಆಕೆಗೆ ಬೇಸರ ತರಿಸಿರಬೇಕು ಎಂದುಕೊಂಡು ಅಸ್ತಮಿಸುವ ಸೂರ್ಯನನ್ನು ನೋಡುತ್ತಾ ಕುಳಿತೆ.ನನ್ನದೇನೂ ಕವಿ ಹೃದಯವೇ;ಸೂರ್ಯನನ್ನು ನೋಡಿದಾಗ ಏನಾದರೂ ಅನ್ನಿಸಲು.ಏನೂ ತೋಚುತ್ತಿಲ್ಲ,ಈಕೆ ಮಾತನಾಡುತ್ತಿಲ್ಲ.ಮೌನದಲ್ಲಿ ಕುಳಿತಿರುವ ಪ್ರೀತಿಯನ್ನು ನೋಡುವುದೇ ಒಂದು ಖುಷಿ ನನಗೆ.ಈಕೆ ಇಷ್ಟೊಂದು ಗಹನವಾಗಿ ಕುಳಿತಿದ್ದರಿಂದ ಏನೋ ಹೇಳುತ್ತಾಳೆಂದು ಖಾತ್ರಿಯಾಯಿತು.
     ನೀಳವಾದ ಉಸಿರು ತೆಗೆದುಕೊಂಡು,"ಈ ಭೂಮಿ ಮತ್ತು ಸೂರ್ಯರ ನಡುವೆ ಎಷ್ಟೊಂದು ಪ್ರೀತಿ...!ನಾಳೆ ತಮ್ಮೀರ್ವರ ಭೇಟಿ ಆಗುತ್ತೆ ಅನ್ನುವ ವಿಶ್ವಾಸವೇ ಅವರೀರ್ವರೂ ಬದುಕುವಂತೆ ಮಾಡಿದ್ದು ಅಂತ ಅನ್ನಿಸುತ್ತೆ.ನೋಡು,ನಾಳೆ ಪುನಃ ಬರುವ ಸೂರ್ಯನೇ ಇಂದು ಅಗಲಬೇಕಾದ ವಿರಹದಲ್ಲಿ ವ್ಯಥೆಪಟ್ಟು ವ್ಯಥೆಪಟ್ಟು ಕೆಂಪಾಗಿದ್ದಾನೆ.ಭೂಮಿಯ ಅಳು,ಬೇಸರಕ್ಕೆ ಸಾಕ್ಷಿಯಾಗಿ ಹೋದ ಕಣ್ಣೀರಂತೆ ಈ ಸಮುದ್ರ.ನಾಳೆ ಪುನಃ ಬರುವವರೆಗೂ ಈಕೆಯ ಅಳು,ಆತನ ಬೇಸರ ಕಳೆದಿರುತ್ತದೆಯೇ...ಈ ದಿನ ಸಂಜೆ ಎಷ್ಟು ಕೆಂಪಾಗಿ ಮರೆಯಾಗಿದ್ದಾನೋ ನಾಳೆ ಬೆಳಗ್ಗೆಯೂ ಅಷ್ಟೇ ಕೆಂಪಗಿರುತ್ತಾನೆ;ಈಕೆಯೂ ಕೂಡಾ.ಹಾಗಂತ ಈರ್ವರ ಬೆಳಗಿನ ಚೈತನ್ಯವನ್ನು ಯಾವುದಕ್ಕಾದರೂ ಹೋಲಿಸಲಾದೀತೇ?ಸಮಯ ಕಳೆದ ಹಾಗೇ ತನ್ನನ್ನು ತಾನು ಸೂರ್ಯನಿಗೆ ತೆರೆದುಕೊಳ್ಳುವ ಭೂಮಿ,ಪ್ರಸನ್ನನಾಗಿ ಭೂಮಿಯನ್ನು ಬೆಳಗುವ ಸೂರ್ಯ..."ಆಳವಾಗಿ ಉಸಿರು ಬಿಟ್ಟಳು.ನನ್ನಿಂದ ತಿರುಗಿ ಮಾತಿರಲಿಲ್ಲ.ಮಾತು ಬೇಕಾಗಿಯೂ ಇರಲಿಲ್ಲ.ಪ್ರೀತಿಯ ಮಾತುಗಳು ನನ್ನನ್ನು ಯಾವುದೋ ಲಹರಿಗೆ ಒಯ್ದಿತ್ತು."ಇಷ್ಟು ಪ್ರೀತಿ ಇರುವವರು ಕೇವಲ ಕಣ್ಣುಗಳಲ್ಲೇ ಮಾತನಾಡಿಕೊಳ್ಳುತ್ತಾರಲ್ಲಾ...!" ತನ್ನನ್ನು ತಾನೇ ಪ್ರಶ್ನಿಸಿಕೊಂಡದ್ದೋ ಅಥವಾ ನನಗೆ ಕೇಳಿದ್ದೋ ತಿಳಿಯಲಿಲ್ಲ.ಉತ್ತರ ಹುಡುಕುವ ಆಸ್ಥೆಯೂ ಇರಲಿಲ್ಲ.ಅಳುವಿನಂತೆ ಕೇಳುತ್ತಿರುವ ಕಡಲ ಭೋರ್ಗರೆತ ಬಿಟ್ಟು ಮತ್ತಾವ ಸದ್ದೂ ಕರ್ಣ ಪಟಲವನ್ನು ಭೇದಿಸುತ್ತಿರಲಿಲ್ಲ.ಸೂರ್ಯ ಸಂಪೂರ್ಣ ಮರೆಯಾದ ನಂತರ ಕಾಲುಗಳು ಹೆಜ್ಜೆ ಹಾಕತೊಡಗಿದವು;ಬೆಳಕನ್ನರಸುತ್ತಾ...

********

     ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುತ್ತಾ ಕುಳಿತಿದ್ದೆ.ಎರಡು ವರ್ಷವಾಯಿತು,ಸೂರ್ಯ ಮರೆಯಾಗುವ ಗಳಿಗೆಯನ್ನು ತಪ್ಪಿಸಿಕೊಂಡವನಲ್ಲ.ಪ್ರೀತಿಯ ಪರಿಚಯವಾದ ಮೇಲೆಯೇ ಸಂಜೆಯ ವಿಹಾರ ದಿನಚರಿಯ ಭಾಗವಾಗಿ ಹೋದದ್ದು.ಅದೇ ಸೂರ್ಯ,ಅದೇ ಭೂಮಿ,ಅದೇ ವಿಶ್ವಾಸ,ಅದೇ ಪ್ರೀತಿ...ಎಂದಾದರೂ ಬತ್ತೀತೇ?ಯೋಚಿಸುತ್ತಿರುವಾಗಲೇ ಪ್ರೀತಿ ಕಣ್ಣ ಮುಂದೆ ಹಾದು ಹೋದಂತಾಯಿತು.
      ಯಾಕೋ ಇತ್ತೀಚೆಗೆ ಪ್ರೀತಿ ಅಂದರೆ ಒಂದು ರೀತಿಯ ಪುಳಕ.ಒಲವೋ,ಸ್ನೇಹವೋ...ವಿಶ್ಲೇಷಿಸುವ ಸಾಮರ್ಥ್ಯ ನನಗಿಲ್ಲ.ಹಾಗಂತ ಆಕೆಯ ಹೊರತಾದ ಬದುಕನ್ನು ಕಲ್ಪಿಸಿಕೊಳ್ಳುವ ಸಾಮರ್ಥ್ಯವನ್ನೂ ಕಳೆದುಕೊಂಡಿದ್ದೇನೆ.ಸಂಬಂಧಗಳ ಇನ್ನೊಂದು ಮಜಲಿಗೆ ನನ್ನನ್ನು ನಾನು ತೆರೆದುಕೊಳ್ಳಬೇಕು,ಪ್ರೀತಿಯೊಂದಿಗೆ...ರೆಕ್ಕೆ ಬಂದಂತಾಯಿತು,ಹೀಗೆ ಎಣಿಸಿದಾಗಲೆಲ್ಲ ರೋಮಾಂಚನ,ವರ್ಣಿಸಲಸಾಧ್ಯ.ಆಕೆಗೂ ನನ್ನ ಮೇಲೆ ಪ್ರೇಮವಿರಬಹುದೇ...ನನ್ನ ಬಳಿ ಅಷ್ಟೊಂದು ಆಪ್ತವಾಗಿರುತ್ತಾಳಲ್ಲ..ಇರಬಹುದು...ಮನದಲ್ಲಿ ಮೂಡಿದ ಪ್ರಶ್ನೆಗಳಿಗೆ ಉತ್ತರವನ್ನು ನಾನೇ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೆ.
     ಎಲ್ಲವಕ್ಕೂ ವಿರಾಮವನ್ನಿಡುವಂತೆ ಪ್ರೀತಿ ಬಂದು ಕುಳಿತಳು.ಹೌದು,ಇಂದು ಸಂಜೆ ಕರೆ ಮಾಡಿದ್ದಳು."ಇವತ್ತು ಸಂಜೆ ಸಿಕ್ಕೋ..ನಿಂಗೆ ಏನೋ ಹೇಳ್ಬೇಕು."ಆ ಒಂದು ಕರೆಯೇ ಕನಸುಗಳನ್ನು ಕಟ್ಟಲು ಮೂಲವಾಗಿದ್ದು.ತಾಯಿಗೆ ಮೈ ಸರಿ ಇಲ್ಲವೆಂದು ಹೇಳಿ ಈಕೆ ಮೊದಲಿನಂತೆ ವಿಹಾರಕ್ಕೆ ಬರುತ್ತಿರಲಿಲ್ಲ.ಇತ್ತೀಚೆಗೆ ಸಂಶೋಧನಾ ಕೆಂದ್ರದಲ್ಲೂ ಕಾಣಸಿಗುತ್ತಿರಲಿಲ್ಲ.ಒಂದು ತಿಂಗಳ ಹಿಂದೆ 'ನಾನಿನ್ನು ಬಿಡಬೇಕೆಂದಿದ್ದೇನೆ.ಮನೆಯ ಕೆಲಸವೇ ಜಾಸ್ತಿ,ಹೊಂದಿಸಿಕೊಂಡು ಹೋಗುವುದು ಕಷ್ಟ.ಅಪ್ಪಂಗೂ ನಿವೃತ್ತಿಗೆ ಮೂರು ವರ್ಷವಷ್ಟೇ ಬಾಕಿ.ಕೆಲಸ ಹುಡುಕಬೇಕು.ಅಮ್ಮಂಗೂ ಮೈ ಸರಿ ಇಲ್ಲ.ಮೊದಲು ಬದುಕುವುದಕ್ಕೆ ದಾರಿ ಕಂಡುಕೊಳ್ಳಬೇಕು.ಸಂಶೋಧನೆ ಮುಂದೆ ಯಾವಾಗಲಾದರೂ ಮುಗಿಸುತ್ತೇನೆ"ಎಂದು ಉಸಿರಿದ್ದಳು.ಈಕೆಯ ಮನೆಯ ಪರಿಸ್ಥಿತಿ ತಿಳಿದ ನಾನೂ ಹ್ಞೂಂಗುಟ್ಟಿದ್ದೆ..ಆಮೇಲಾಮೇಲೆ ಅಪರೂಪಕ್ಕೊಮ್ಮೆ ಸಿಗುತ್ತಿದ್ದಳು.ಇಂದು ಈಕೆಯೇ ಬಂದು ಕುಳಿತಿದ್ದಾಳೆ.
     ಪ್ರೀತಿಯ ಈ ಮುಖಭಾವ ಕಂಡದ್ದು ಇದೇ ಮೊದಲು.ಎಂದಿನಂತೆ ಅವಳೇ ಮಾತಿಗೆ ತೊಡಗಿದಳು."ಇನ್ನು ಎಷ್ಟು ವರ್ಷ ಬೇಕು ಸಂಶೋಧನೆ ಮುಗಿಯಲು?"ಈ ಪ್ರಶ್ನೆ ಈಗ ಏಕೆ ತೂರಿಬಂತೆಂದು ಅರ್ಥವಾಗಲಿಲ್ಲ.ಎಂದಿನಂತೆ ನೇರ ಮಾತಿಗಿಳಿದಿಲ್ಲ,ಸುತ್ತಿ ಬಳಸುತ್ತಿದ್ದಾಳೆ.ನಾನೆಣಿಸಿದಂತೆ ..... ಇರಬಹುದೆಂದು ಮನಸ್ಸು ಹೇಳುತ್ತಿತ್ತು."ಗೊತ್ತಿಲ್ಲ,ಇನ್ನೊಂದು ತಪ್ಪಿದರೆ ಮತ್ತರ್ಧ ವರ್ಷ"ಎಂದೆ."
     ಹ್ಞ್ಂ...ನನಗೆ ಬೆಂಗ್ಳೂರಲ್ಲಿ ಕೆಲಸ ಸಿಕ್ತು..ಇನ್ನೆರಡು ವಾರಕ್ಕೆ ಮನೆ ಖಾಲಿ ಮಾಡ್ತಾ ಇದೀವಿ.ಇಲ್ಲಿ ಏನೂ ಇರಲ್ಲ.ಇದ್ದ ಒಂದು ಮನೇನೂ ಮಾರ್ತೀವಿ.ಎಲ್ಲಾ ಬೆಂಗಳೂರಿಗೆ...ಅಮ್ಮನ ಆರೋಗ್ಯ ನೋಡಿಕೊಳ್ಲಿಕ್ಕೂ ಸಹಾಯ ಆಗತ್ತೆ" ಮಾತಿನಲ್ಲಿ ಎಂದಿನ ಚೈತನ್ಯವಿರಲಿಲ್ಲ.ಮೊದಲ ಬಾರಿಗೆ ಆಕೆಯ ಮಾತಿಗೆ ಕಿವಿ ಕಿವುಡಾಗುತ್ತಿತ್ತು.ಮಾತಿಗೆ ಹ್ಞೂಂಗುಟ್ಟುವುದೂ ಎಲ್ಲೋ ನಿಂತು ಹೋಗಿತ್ತು.ನನ್ನ ಮುಖವನ್ನೇ ನೋಡುತ್ತಿದ್ದಳು.ನನಗೆ ಆಕೆಯ ಮುಖವನ್ನು ನೋಡುವ ಶಕ್ತಿಯನ್ನು ಆಕೆಯ ಯಾವುದೋ ಮಾತು ಕಸಿದುಕೊಂಡಿತ್ತು.ಯಾವುದು,ಯಾಕೆ ಎಂದು ತಿಳಿಯಲಿಲ್ಲ.ಎರಡು ವರ್ಷದ ಹಿಂದೆ ಕುಳಿತಿದ್ದ ಅಂತರ ಈಗ ದುಪ್ಪಟ್ಟಾಗಿತ್ತು.ಮನಸ್ಸಿನಲ್ಲಿ...?ಗೊತ್ತಿಲ್ಲ.
     ಅರೆ!ಪ್ರೀತಿಯ ಅಗಲುವಿಕೆ ಏಕೆ ಇಷ್ಟೊಂದು ಆಘಾತ ತರುತ್ತಿದೆ ಎಂದು ಆಶ್ಚರ್ಯವಾಯಿತು.ಪ್ರೀತಿಯ ಮೇಲೆ ನಿಜವಾಗಿ ಒಲವು ಮೂಡಿತ್ತೇ..?ಉತ್ತರವಿಲ್ಲದ ಪ್ರಶ್ನೆ ಇದು.ಆಕೆಗೆ..?ಇದೂ ಉತ್ತರವಿಲ್ಲದೇ ಸೊರಗುತ್ತಿತ್ತು.ಆಕೆಯ ಕಣ್ಣುಗಳಲ್ಲಿ ಪ್ರೀತಿಯನ್ನು ಹುಡುಕಹೊರಟು ಸೋತಿದ್ದೆ.ನಾನಾಗೇ ಹೇಳಲಿಲ್ಲ;ಆಕೆಯೂ.
     ಎರಡು ವರ್ಷಗಳಲ್ಲಿ ಜೊತೆಯಾದ ಕ್ಷಣಗಳು ಕಣ್ಣೀರಿನೊಂದಿಗೆ ಕರಗುತ್ತಿದ್ದವು.ಆಕೆಯಲ್ಲೂ ಅದೇ ಭಾವವೇನೋ...ಆಕೆಯೂ ತಲೆ ತಗ್ಗಿಸಿದ್ದಳು.ಪರಸ್ಪರ ಮುಖವನ್ನು ನೋಡುವ ಧೈರ್ಯ ಬರಲಿಲ್ಲ.
     "ನಿನ್ನೊಂದಿಗೆ ಕಳೆದ ಕ್ಷಣಗಳು ಖುಶಿ ಕೊಟ್ಟಿತ್ತು.ಇನ್ನು..."ಗದ್ಗದಿತಳಾದಳು.ನನ್ನ ಬಾಯಿಂದ ಮಾತು ಹೊರಡುತ್ತಿಲ್ಲ.ಆಕೆಯ ಮೇಲೆ ಒಲವು ಮೂಡಿದ್ದೇ ಹೌದಾದರೆ ಹೇಳಿ ಉಳಿಸಿಕೊಳ್ಳಲೇ?ಮನಸ್ಸಿಗಿದ್ದ ಕ್ರಿಯಾಶೀಲತೆ ದೇಹಕ್ಕಿರಲಿಲ್ಲ.
     "ದೇವರ ಇಚ್ಚೆ ಇದ್ದರೆ, ಇನ್ನೆಂದಾದರೂ ಸಿಗೋಣ" ತಿರುಗಿ ನಡೆದ ಪಾದಗಳೊಂದಿಗೆ,ಕಟ್ಟಿದ್ದ ಕಂಬನಿಗಳೂ ಜಾರಿ ನೆಲದಲ್ಲಿ ಅಸ್ತಿತ್ವ ಹುಡುಕಿಕೊಂಡವು.ನನಗೂ ಗೊತ್ತು,ಕೊನೆಯ ಮಾತು ನಡೆಯದೇ ಇದ್ದರೂ,ಮನಸ್ಸಿನಾಳದಿಂದಲೇ ಬಂದದ್ದುಎಂದು.
     ಎದ್ದು ಹೋಗಿ ಕೈ ಹಿಡಿದು ಕರೆತಂದು ಕೂರಿಸಿಕೊಳ್ಳಲೇ...?
     ನಾನು ಯಾರು ತಡೆಯುವುದಕ್ಕೆ...?ನಾನೇನಾದರೂ ಆಕೆಗೆ ಪ್ರೇಮ ನಿವೇದನೆ ಮಾಡಿದ್ದೇನೆಯೇ ಅಥವಾ ಆಕೆಯೇ ಮಾಡಿದ್ದಾಳೆಯೇ..?ಇಲ್ಲವಲ್ಲ.ಕೇವಲ ಹತ್ತಿರವಾದದ್ದಕ್ಕೆ ಯಾವ ಹಣೆಪಟ್ಟಿ ನೀಡಲಿ..
     ನನಗೂ ಗೊತ್ತು,ಈ ಮಾತುಗಳು ಆಕೆಯ ಅಗಲುವಿಕೆಯ ನೋವನ್ನು ಮರೆಮಾಚಲು ಹೇಳಿಕೊಳ್ಳಬಹುದಾದಂಥವುಗಳು.ಅಷ್ಟಕ್ಕೂ ಒಲವು ಮಾತಿನಲ್ಲೋ...ಮೌನದಲ್ಲೋ...?
     ಉತ್ತರ.....?
     ಪರಸ್ಪರ ಸಮಾನಾಂತರವಾಗಿ,ಕಣ್ಣಿಗೆ ಕಣ್ಣು ಕೊಟ್ಟಿದ್ದ ಭೂಮಿ,ಸೂರ್ಯ ದೂರಾಗುತ್ತಿದ್ದರು.ಪರಿಣಾಮವಾಗಿ ಸೂರ್ಯ ನೋವಿನಿಂದ ಕೆಂಪಾಗಿದ್ದ.ಭೂಮಿಯ ವೇದನೆಯ ಕುರುಹೆಂಬಂತೆ ಸಾಗರದ ಅಲೆಯ ಸಪ್ಪಳ ಜೋರಾಗುತ್ತಿತ್ತು...ಇಬ್ಬರ ಬದುಕನ್ನು ಹಿಡಿದಿಟ್ಟಿರುವುದು ನಾಳೆ...ನಾಳೆಯ ಬೆಳಗು.....

********




( ಏಪ್ರಿಲ್ 17 ,2016 ರ ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾದ ಕತೆ)

[ಚಿತ್ರ ಕೃಪೆ google]