Friday 20 November 2015

ದೀಪಾವಳಿಯ ಸ್ಮೃತಿಯಲ್ಲಿ...೩

ಮೂರನೇ ದಿನ : ಅಮವಾಸ್ಯೆ,ಲಕ್ಷ್ಮೀ ಪೂಜೆ


ಮೈಸೂರಿನಲ್ಲಿದ್ದು ನಾನು ಗಮನಿಸಿದಂತೆ ದೀಪಾವಳಿಯಮೂರನೇ ದಿನದಂದು ಗೌಜು-ಗದ್ದಲಗಳು ಸಾಮಾನ್ಯ.ನಾನಿರುವ ಜಾಗದ ಸುತ್ತ-ಮುತ್ತಲೂ ಇರುವಂತವರು ವ್ಯಾಪಾರೀ ಸಮುದಾಯದವರು.ಹಾಗಾಗಿ ಲಕ್ಷ್ಮೀ ಪೂಜೆಯ ಸಂಭ್ರಮ ಸ್ವಾಭಾವಿಕವಾಗಿಯೇ ಕಳೆಗಟ್ಟುತ್ತದೆ.ಆದರೆ ಊರಿನಲ್ಲಿ ಹಾಗಲ್ಲ.
     ಮಾಮೂಲಿಯಾಗಿ ಕಳೆದು ಹೋಗುವ ದಿನದಂತೆಯೇ ಇಂದೂ ಸಹ ಯಾವುದೇ ಗೌಜಿಲ್ಲ.ಹಬ್ಬದ ಸಡಗರವೂ ಎದ್ದು ಕಾಣುವುದಿಲ್ಲ ; ವರ್ತಕರ ಮನೆಗಳನ್ನು ಹೊರತುಪಡಿಸಿ. ನಮ್ಮ ಮನೆಯ ಸುತ್ತಲೂ ಯಾವುದೇ ಅಂಗಡಿಯಿಲ್ಲ.ಆದ್ದರಿಂದ ಹಬ್ಬದ ಬಿಸಿ ತಟ್ಟುತ್ತಿರಲಿಲ್ಲ.ಆದರೂ 'ದಿನದ ವಿಶೇಷ'ಎನ್ನುವಂತಹ ಸಂದರ್ಭ ಒಂದಿತ್ತು ...
     ಅಪ್ಪ ಯಾವಾಗಲಾದರೊಮ್ಮೆ "ಇದ್ನ ತೆಗ್ಡಿಡಿ ಅಪ್ಪಯ್ಯ" ಎಂದು ಕೊಡುತ್ತಿದ್ದ ದುಡ್ಡು , ಊಟದ ಮನೆಗೆ ಹೋಗಿದ್ದಾಗ ಕೊಡುತ್ತಿದ್ದ ದಕ್ಷಿಣೆ ಇವುಗಳನ್ನ ಸೇರಿಸುತ್ತಿದ್ದುದು ನಾನು ಹಣ ಕೂಡಿಡುತ್ತಿದ್ದ ಡಬ್ಬಿಗೆ.ಇದರಲ್ಲೂ ನನಗೆ ತಂಗಿಗೆ ಯಾವಾಗಲೂ ಶೀತಲ ಸಮರವೇ ನಡೆಯುತ್ತಿತ್ತು.ಅವಳಿಗೋ ಹೋದಲ್ಲೆಲ್ಲಾ "ಪುಟ್ಟಿ ಬಂದಳೆ ಕಣ್ರೋ" ಎಂದು ಹೇಳಿ ಅರಿಶಿಣ-ಕುಂಕುಮದೊಂದಿಗೆ ಕಡೇ ಪಕ್ಷ ಒಂದೈದು ರೂಪಾಯಿಯಾದರೂ ಕೊಡುತ್ತಿದ್ದರು.ಆದರೆ ನನಗೆ ಯಾರು ಕೊಡುತ್ತಾರೆ.? ಆಗೆಲ್ಲ ಬೇಸರವಾಗುತ್ತಿತ್ತು.ಅವಳಿಗೆ ಸಿಕ್ಕಿದಕ್ಕೆ ಪ್ರತಿಯಾಗಿ ನಾನು ಯಾವ ಮೂಲದಿಂದ ಹಣ ಪಡೆಯುವುದು ಎಂದು ಯೋಚಿಸುತ್ತಿದ್ದೆ.ಆಗೆಲ್ಲ ನನ್ನ ಕಣ್ಣಿಗೆ ಬೀಳುತ್ತಿದ್ದುದು ಅಮ್ಮ.ಅಮ್ಮನ ಬಳಿ ಕಾಡಿ ಬೇಡಿ ತಂಗಿಗೆ ಸಿಕ್ಕಿದ್ದಕ್ಕಿಂತ ಒಂದು ರೂಪಾಯಿಯಾದರೂ ಹೆಚ್ಚಿಗೆ ಪಡೆದು ಡಬ್ಬಿಗೆ ಹಾಕಿಡುತ್ತಿದ್ದೆ.ಒಂದು ವೇಳೆ ನಾನು ಕೇಳಿದಾಗ ಕೊಡದಿದ್ದರೆ ಒಪ್ಪಂದ ಮಾಡಿಕೊಂಡುಬಿಡುತ್ತಿದ್ದೆ ; ಅಮ್ಮನಿಗೆ ಸಿಕ್ಕಬಹುದಾದ ದುಡ್ಡೆಲ್ಲವೂ ನನ್ನ ಡಬ್ಬಿಗೆ ಎಂದು.ಅಮ್ಮನೂ ಒಪ್ಪುತ್ತಿದ್ದರು.ಇದೆಲ್ಲಾ ಆದಷ್ಟು ರಹಸ್ಯದಿಂದಲೇ ನಡೆಯಬೇಕಾಗಿದ್ದ ಕಾರ್ಯ.ಅಕಸ್ಮಾತ್ ರಹಸ್ಯ ಬಯಲಾದರೆ ತಂಗಿ ಅಪ್ಪನ ಬಳಿ ಹೋಗಿ ಒಪ್ಪಂದ ಮಾಡಿಕೊಂಡುಬಿಡುತ್ತಿದ್ದಳು. ಅದಕ್ಕೇ 'ಶೀತಲ ಸಮರ'ವೆಂದದ್ದು.
   ಯಾರ ಡಬ್ಬ ಹೆಚ್ಚು ಭಾರವಿರುತ್ತಿತ್ತೋ ಅವರ ಕರಡಿಗೆಯಲ್ಲಿ ಹೆಚ್ಚು ದುಡ್ಡಿದೆ ಎಂಬ ಭಾವನೆ ನಮ್ಮದು.ನೋಟುಗಳು ನಮ್ಮ ಲೆಕ್ಕದಲ್ಲಿ ನಗಣ್ಯ ; ಚಿಲ್ಲರೆಗಳಿಗೇ ಬೆಲೆ.ಒಂದು ಲೆಕ್ಕದಲ್ಲಿ ಅಪ್ಪ-ಅಮ್ಮನಿಗೆ ಇದು ಸಮಾಧಾನಕರವಾಗಿಯೂ ಇತ್ತು.ನೋಟುಗಳ ತೂಕದ ಆಧಾರದ ಮೇಲೆ ಗಲಾಟೆ ಮಾಡಿಕೊಳ್ಳುವುದಕ್ಕಿಂತ ಚಿಲ್ಲರೆಯ ತೂಕವೇ ಉತ್ತಮ ಎಂದು ಭಾವಿಸಿದ್ದರೋ ಏನೋ...
    ಹೀಗೆ ಪೈಪೋಟಿಯಿಂದ ಕೂಡಿಟ್ಟ ಹಣದ ಡಬ್ಬಕ್ಕೆ ಪೂಜೆ ಮಾಡುವ ದಿನ ಇದು.ಇಡಿಯ ವರ್ಷದಲ್ಲಿ ಡಬ್ಬ ತನ್ನ ಜಾಗವನ್ನು ಬದಲಿಸುತ್ತಿದ್ದುದು ಈ ದಿನ ಮಾತ್ರ.ಪೂಜೆ ಮುಗಿದ ನಂತರ ಮರಳಿ ಸ್ವಸ್ಥಾನವನ್ನು ಸೇರಿದರೆ ಮತ್ತೆ ತನ್ನ ಜಾಗದಿಂದ ಕದಲುತ್ತಿದ್ದುದು ಮುಂದಿನ ವರ್ಷವೇ...

Thursday 19 November 2015

ದೀಪಾವಳಿಯ ಸ್ಮೃತಿಯಲ್ಲಿ.....೨

                         
  ಎರಡನೇ ದಿನ : ಅಭ್ಯಂಗ,ನರಕ ಚತುರ್ದಶಿ...

               "ಅಪ್ಪಯ್ಯ...ಏಳಾ...ನೋಡು,ಎಲ್ರದ್ದು ಸ್ನಾನ ಆಗ್ತಾ ಬಂತು.ನೀನಿನ್ನೂ ಎಣ್ಣೆ ಹಚ್ಕಳ್ಲಲ..."ಎಂದು ಹುಸಿ ಮುನಿಸಿನಿಂದ ಅಪ್ಪ ಎಬ್ಬಿಸಿಲು ಪ್ರಯತ್ನಿಸುತ್ತಿದ್ದರು."ಹ್ಞಂ...ಸ್ವಲ್ಪ ಹೊತ್ತು.." ಅರೆ ನಿದ್ರೆಯಲ್ಲಿ ಮಾತು ಮುಂದುವರೆಯುವ ಮುನ್ನವೇ "ಏಳ್ತ್ಯಾ..ಇಲ್ವಾ..? " ಎಂಬ ಮಾತು ಕಿವಿಗೆ ಅಪ್ಪಳಿಸಿತು... "ಏಳ್ತೀನಿ... ಎದ್ದೆ.." ಎಂದು ಬಲಮಗ್ಗುಲಿಗೆ ಹೊರಳಿ ಕಣ್ಣುಬಿಟ್ಟೆ.ಚಿಕ್ಕಂದಿನಿಂದಲೂ  'ಅಪ್ಪಯ್ಯ'ನೆಂದೇ  ನನ್ನನ್ನು ಕರೆಯುತ್ತಿದ್ದ ಅಪ್ಪ ಒಮ್ಮೆ ಬೆಳಗ್ಗೆ ಬೇಗ ಏಳಲಿಲ್ಲವೆಂದು ಹೊಡೆದ ಪೆಟ್ಟಿನ ನೋವು ಜೀವಮಾನವಿಡೀ ನನ್ನ ಬೆಳಗಿನ ನಿದ್ದೆಯನ್ನು ತಿನ್ನುವಷ್ಟು ಶಕ್ತಿಶಾಲಿಯಾಗಿತ್ತು . ಹಾಗಾಗಿ ಅಪ್ಪ ಕರೆದ ತಕ್ಷಣ ಮರು ಮಾತಿಲ್ಲದೇ ಎದ್ದೆ.
               ನಿರೀಕ್ಷೆಯಂತೆ "ಬನ್ನಿ ಅಪ್ಪಯ್ಯ ಇಲ್ಲಿ..ಇವತ್ತು ನಾನು ಎಣ್ಣೆ ಹಚ್ತೀನಿ..." ಎಂದು ಮುದ್ದಾಗಿ ಅಪ್ಪ ಕರೆದಾಗ ಪುಳಕೋತ್ಸವ;ಪ್ರತೀ ಬಾರಿಯಂತೆಯೇ.ಹಾಗಾಗಿಯೇ ವರ್ಷವೂ ಅಭ್ಯಂಗಕ್ಕೆ ಕಾತರದಿಂದ ಕಾಯುತ್ತಿದ್ದುದು.ಶಾಲೆಗೆ ಹೋಗುವಾಗ ಅಮ್ಮನೇ ತಲೆಗೆ ಎಣ್ಣೆ ಹಾಕಿ,ಎಷ್ಟು ಪ್ರಯತ್ನ ಪಟ್ಟರೂ ನಿರ್ದಿಷ್ಟ ವಿನ್ಯಾಸಕ್ಕೆ ಬರಲೊಪ್ಪದ ಕೂದಲನ್ನು ಹೇಗೋ ಒಂದು ಸ್ಥಿತಿಗೆ ತಂದು ಕಳಿಸುತ್ತಿದ್ದಳು. ಹೀಗಾಗಿ ಅಪ್ಪ ಎಣ್ಣೆ ಹಾಕಿ ತಿಕ್ಕುತ್ತಿದ್ದ  ಸಂದರ್ಭಗಳೇ ವಿರಳ.ಅಭ್ಯಂಗದ ದಿನವನ್ನು ಬಿಟ್ಟು ಅವರು ಎಣ್ಣೆ ಹಾಕಿ ನನ್ನ ಮೈ-ಕೈ ತಿಕ್ಕವುದು ಎಲ್ಲಾದರೂ ಬಿದ್ದು ನೋವು ಮಾಡಿಕೊಂಡಾಗ ಮಾತ್ರ.ಕಾಲಾತೀತವಾಗಿ ಮನೆಯ ಅಂಗಳದಲ್ಲಿ ಯಾವಾಗಲೂ ಇರುತ್ತಿದ್ದ ಕಳೆಗೂ ನನ್ನ ಮೈಯಲ್ಲಿಯ ಗಾಯಕ್ಕೂ ನೇರ ಹೋಲಿಕೆ ಮಾಡಬಹುದಾಗಿತ್ತು.ಒಂದು ವೇಳೆ ಗಾಯವಿಲ್ಲದಿದ್ದರೂ ಸುಳ್ಳು ಹೇಳಿಯಾದರೂ ಮೈ- ಕೈ ತಿಕ್ಕಿಸಿಕೊಳ್ಳುತ್ತಿದ್ದೆ.ಆದರೆ ವರ್ಷಕ್ಕೊಮ್ಮೆ ಬರುವ 'ಎಣ್ಣೆ ಸ್ನಾನ'ದ ಮಜವೇ ಬೇರೆ.
               ಕಡೆಯುವ ಕಲ್ಲಿನ ಬುಡದಲ್ಲಿ ನನ್ನನ್ನು ಕೂರಿಸಿಕೊಂಡು ಅಪ್ಪ ಎಣ್ಣೆ ಹಾಕಿ ತಿಕ್ಕುತ್ತಿದ್ದರು.ಮಲೆನಾಡಿನ ಚಳಿಗೆ ಮರಗಟ್ಟಿ ಹೋಗುತ್ತಿದ್ದ ಕೈ-ಕಾಲುಗಳು ಅಪ್ಪನ ಸ್ಪರ್ಶಕ್ಕೆ ಮರಳಿ ಬಿಸಿಯಾಗುತ್ತಿದ್ದವು.ದೇಹದ ನೋವನ್ನೆಲ್ಲಾ ತಿಕ್ಕಿ ತೆಗೆದ ಅನುಭವವಾಗುತ್ತಿತ್ತು. "ಸಾಕೆನಾ..?" ಯಾವುದೋ ಭಾವದಲ್ಲಿ ತೇಲುತ್ತಿದ್ದ ನಾನು ವಾಸ್ತವಕ್ಕೆ ಇಳಿದೆ."ಇನ್ನೊಂಚೂರು ಹೊತ್ತು..." ಎಂಬ ರಾಗ ನನ್ನ ಬಾಯಿಂದ ತಾನಾಗಿಯೇ ಬಂತು. ಕೆಲ ನಿಮಿಷಗಳ ನಂತರ "ಸಾಕು ಕಣಾ...ಜಾಸ್ತಿ ತಿಕ್ಕಿದ್ರೆ ಮೈ-ಕೈ ಎಲ್ಲಾ ನೋವು ಬರುತ್ತೆ.ಅರ್ಧ ಗಂಟೆ ಬಿಟ್ಟು ಸ್ನಾನ ಮಾಡು...ಎಣ್ಣೆ ಎಲ್ಲಾ ಆರ್ಲಿ.ಸ್ವಲ್ಪ ತಿರುಕ್ಕೊಂಡು ಬಾ" ಎಂದಾಗ  ತುಂಡು ಪಂಚೆ ಸಿಕ್ಕಿಸಿಕೊಂಡು ಯಕ್ಷಗಾನದ ಪದ್ಯವನ್ನು ಗುನುಗಿಕೊಳ್ಳುತ್ತಾ ನಡೆದೆ;ಕಾಲುಗಳು ತಮ್ಮಷ್ಟಕ್ಕೆ ಹೆಜ್ಜೆ ಹಾಕಲು ಪ್ರಯತ್ನಿಸುತ್ತಿದ್ದವು.
               ಕಾವು ಪಡೆದ ದೇಹಕ್ಕೆ ನಿಧಾನವಾಗಿ ಚಳಿಯ ಅನುಭವವಾಗತೊಡಗಿತು.ಸೀದಾ ಅಡಿಕೆಯನ್ನು ಬೇಯಿಸುತ್ತಿದ್ದ ಒಲೆಯ ಬಳಿ ಹೋದೆ. ಸ್ವಲ್ಪ ಹೊತ್ತು ಚಳಿ ಕಾಯಿಸುತ್ತಾ ಕುಳಿತಿದ್ದೆ.ಇದ್ದಕ್ಕಿದ್ದಂತೆ 'ವಾಣಿ'ಯ ನೆನಪಾಯಿತು."ಪಾಪದ್ದು,ಇವತ್ತು ಅದ್ನ ಮಾತಾಡಿಸ್ಲೇ ಇಲ್ಲ.ಎಂತ ಮಾಡ್ತುಂಟೇನ..."ಎಂದು ಯೋಚಿಸುತ್ತಾ 'ಹಟ್ಟಿ'ಯ ಕಡೆ ನಡೆದೆ. ಕಾಲಾಡಲಿ ಎಂದು ಬಿಟ್ಟಿದ್ದ ಅದು ನಾನು ಹೋದೊಡನೆಯೇ ತನ್ನನ್ನು ಕಟ್ಟಲು ಬಂದರು ಎಂದು ಭಾವಿಸಿ ಹಟ್ಟಿಯ ತುಂಬಾ ಕುಣಿಯಲು ತೊಡಗಿತು.ಅಷ್ಟರಲ್ಲಿ ಅಮ್ಮ ಸ್ನಾನಕ್ಕೆ ಕರೆದರು.ಬಿಸಿ-ಬಿಸಿಯಾದ ನೀರಿಗೆ ಮೈಯನ್ನು ಒಡ್ಡಿಕೊಂಡು ಹೊರಗೆ ಬಂದು ಎಂದಿನಂತೆ ದೇವರಿಗೇ ನನ್ನ ದರ್ಶನವನ್ನು ತೋರಿ ತಿಂಡಿಗೆ ಹೋದೆ.
               ತಿಂಡಿ ಎನ್ನುವುದಕ್ಕಿಂತ ಊಟ ಎನ್ನವುದೇ ಸರಿ.ದೇವರಿಗೆ ಬೆಳಗ್ಗೆಯೇ ನೈವೇದ್ಯ ಆಗಿರುತ್ತಿದ್ದುದರಿಂದ ಪಾಯಸ ಇತ್ತು.ಒಂದು ವೇಳೆ ತಿಂಡಿಯೇ ಬೇಕೆಂದಾದಲ್ಲಿ ಇದ್ದುದು ಹಿಂದಿನ ದಿನದ ಚೀನೀಕಾಯಿ ಕಡುಬು.ಅದಕ್ಕಿಂತ ನನಗೆ ಪ್ರಿಯವಾದ,ಪಾಯಸದಲ್ಲಿ ಅನ್ನ ಕಲೆಸಿಕೊಂಡು ಊಟ ಮಾಡುವುದೇ ಉತ್ತಮವಾದದ್ದು ಎಂದು ಭಾವಿಸಿ ಹಾಗೆಯೇ ತಿಂದೆ.
                ಹೊಟ್ಟೆಗೋ ಏನೋ ಸ್ವಲ್ಪ ಬಿತ್ತು.ಆದರೆ ಅದನ್ನು ಕರಗಿಸಬೇಕಲ್ಲ..ಅದಕ್ಕೆ ಏನು ಕಿತಾಪತಿ ಮಾಡಬಹುದು ಎಂದು ಯೋಚಸಿದೆ.ಏನೂ ತೋಚಲಿಲ್ಲ. ಹಬ್ಬಕ್ಕೆಂದು ಮನೆಗೆ ಬಂದಿದ್ದ ನೆಂಟರು,ತಂಗಿಯರು ಹಾಗೂ ಅಣ್ಣನೊಂದಿಗಿನ ಆಟ-ಕಿತ್ತಾಟಗಳಲ್ಲಿ ಸಮಯ ಕಳೆದೆ. ಅದೂ  ಬೇಜಾರಾಗಲು ತೊಡಗಿತು.ಒಂದು ಆಲೋಚನೆ ಬಂತು.ಅಮ್ಮನ ಬಳಿ ಹೋಗಿ,"ಅಮ್ಮಾ , ಪಟಾಕಿ ಹೊಡೀಲಾ?" ಎಂದು ಕೇಳಿದೆ. "ದನಗಳು ಹೆದರಿಕೊಳ್ತಾವೆ,ಹಗಲಲ್ಲಿ ಕಾಣುದು ಬೇರೆ ಇಲ್ಲ.ರಾತ್ರಿ ಹೊಡಿ" ಎಂಬ ಸಿದ್ಧ ಉತ್ತರಬಂತು. ನಾನೂ ಮುಂಚೆಯೇ ಆಲೋಚಿಸಿದಂತೆ,"ಆಯ್ತಮ್ಮಾ,ಪಟಾಕಿ ಹೊಡೆಯಲ್ಲ.ನಾನು, ಅಣ್ಣ ದಿಂಡಿನ ಮರದ ಹತ್ರ ಕೇಪು ಹೊಡಿತೀವಿ.ಹಂಗೆ ಎಲ್ರನ್ನೂ ಕರ್ಕೊಂಡು ಹೋಗ್ತೀವಿ" ಎಂದು ಹೇಳಿ ತಂಗಿಯರನ್ನು ಕರೆದುಕೊಂಡು ಅಣ್ಣನೊಂದಿಗೆ  ಹೊರಟೆ."ಅಲ್ಲಿ ದರಗು , ಒಣ್ಗಿದ ಕಡ್ಡಿ ಎಲ್ಲಾ ಉಂಟು...ಹುಶಾರು ಮಾರಾಯಾ" ಎಂದು ಅಮ್ಮ ಹೇಳಿದ ಮಾತುಗಳೊಂದಿಗೆ "ಈ 'ಬಾಲೆ' ಒಂದು ...ಹೇಳಿದ್ದು ಕೇಳುಲ್ಲ" ಎನ್ನುವ ಅಜ್ಜಿಯ ಮಾತುಗಳಿಗೂ ಅಡುಗೆ ಮನೆಯ ಗೋಡೆಗಳೇ ಕಿವಿಯಾಗಿದ್ದವು.
                ಮನೆಯವರ ಆದೇಶದಂತೆ ಹಗಲಿನಲ್ಲಿ ಬರಿಯ ಕೇಪು ಹೊಡೆದೆವು.ಅದಕ್ಕಾಗಿ ಬಳಸಿದ್ದು ಸುತ್ತಿಗೆಯನ್ನ.ಕೋವಿಯಲ್ಲಿ ಜಾಸ್ತಿ ಶಬ್ಧ ಬರುವುದಿಲ್ಲ;ಸುತ್ತಿಗೆಯಲ್ಲಿ ಹೊಡೆದರೆ ಮಾತ್ರ ಕೇಪು ಜಾಸ್ತಿ ಶಬ್ಧ ಮಾಡುವುದೆಂಬುದು ನಮ್ಮ ನಂಬಿಕೆ. ಏನಾದರಾಗಲೀ..ಪಟಾಕಿ ಹೊಡೆದೇ ಬಿಡುವ ಎನ್ನುವ ಮನಸ್ಸು ಬಂದಿತಾದರೂ , ಈಗಲೇ ಹೊಡೆದದ್ಯಾಕೆ? ಎಂಬ ಕಾರಣವನ್ನಿಟ್ಟು ನಾಳೆಗೆ ಪಟಾಕಿ ಕೊಡದಿದ್ದರೆ ಕಷ್ಟ ಎಂದುಕೊಂಡು ಸುಮ್ಮನಾದೆವು.ಎಲ್ಲವನ್ನು ಮೀರಿ ಒಂದು ವೇಳೆ ಪಟಾಕಿ ಹೊಡೆಯುವುದಿದ್ದರೂ ಅಣ್ಣನೇ ಹೊಡೆಯಬೇಕು. ನಾನೋ ಪಟಾಕಿ ಹೊಡೆಯುವುದರಿಂದ ಸ್ವಲ್ಪ ದೂರ..ಅದರ ಬಗೆಗಿನ ಹೆದರಿಕೆಯೂ ಕಾರಣವಿರಬಹುದು.
               ಸೂರ್ಯನಿಗೆ ಆ ದಿನ ಬೇಸರ ಬಂದು ಮರೆಯಾಗುವವರೆಗೆ  ನಮ್ಮ ಪಯಣ ಸಾಗಿತು.ವಾಪಸ್ ಮನೆಗೆ ಬಂದೆವು.ಪಟಾಕಿಯನ್ನ ಅಣ್ಣನೇ ಹೊಡೆಯುವುದಾದರೂ ನಾನೂ ಇಡೀ ದೀಪಾವಳಿಯ ಸಂದರ್ಭದಲ್ಲಿ ಒಂದೆರಡು ಹೊಡೆಯುತ್ತಿದ್ದೆ.ಸಂಜೆ  ಪಟಾಕಿ ಹೊಡೆಯುವುದಕ್ಕೆ ದೀಪ ಹಚ್ಚುವವರೆಗೂ ಕಾಯಬೇಕು.ದೀಪ ಹಚ್ಚಿದ ನಂತರ ಸಂಜೆಯ  ತಂಪಾದ ಗಾಳಿಯೊಂದಿಗೆ ಒಂದೆರಡು ಪಟಾಕಿಯ ಸದ್ದು ವಾತಾವರಣವನ್ನು ಸೇರಿ ನೀರವತೆಯಲ್ಲಿ ಪ್ರತಿಧ್ವನಿಸಿತು.ಅಲ್ಲಿಗೆ ಅಂದಿನ ಹಬ್ಬ ಮುಗಿಯಿತು.
               'ನರಕ ಚತುರ್ದಶಿ' ಎಂದು ಹಬ್ಬದ ಹೆಸರಿದ್ದರೂ ಅದರ ಬಗೆಗಿನ ಆಚರಣೆಗಳು ಏನೂ ಇರದುದ್ದರಿಂದ ದೀಪಾವಳಿಯ ಎರಡನೇ ದಿನವೆಂದರೆ ನೆನಪಿಗೆ ಬರುವುದು ಎಣ್ಣೆ ಸ್ನಾನ ಮಾತ್ರ......
                 ವರುಷಗಳೆಷ್ಟೇ ಉರುಳಿದರೂ  ದೀಪಾವಳಿಯ ಈ ದಿನದ ಆಚರಣೆಗಳು ಸಣ್ಣ ವಯಸ್ಸಿನಿಂದಲೂ ಮೇಲಿನ ದಿನಚರಿಯಂತೆಯೇ....ಇದು ನನ್ನ ಪಾಲಿಗೆ ಬದಲಾಗಲೇ ಇಲ್ಲ ಹಾಗೆಯೇ ನನ್ನ ಸಂತೋಷ ಕೂಡಾ ಕಡಿಮೆಯಾಗಲೇ ಇಲ್ಲ ; ಇಮ್ಮಡಿಗೊಳ್ಳುತ್ತಲೇ ಇದೆ.
                ಆದರೆ ಊರ ಹೊರಗಿದ್ದು ಹಬ್ಬ ಆಚರಿಸುವ ಈ ಸಂದರ್ಭಗಳಲ್ಲಿ ಅಪ್ಪನ ಪ್ರೀತಿಯ ಮಾತುಗಳು,ಅಣ್ಣ-ತಂಗಿಯರೊಡನೆಯ ಆಟ-ಕಿತ್ತಾಟ,ಪಟಾಕಿಯ ಬಗೆಗಿನ ಹೆದರಿಕೆ,ದನ-ಕರುಗಳ ಒಡನಾಟ,ಮೈ ಮರಗಟ್ಟಿಸುವ ಚಳಿ,ಇಬ್ಬನಿ..ಇವುಗಳು  ಬಹುವಾಗಿ ಕಾಡತೊಡಗುತ್ತವೆ...

Tuesday 10 November 2015

ದೀಪಾವಳಿಯ ಸ್ಮೃತಿಯಲ್ಲಿ.....೧

                   



                 ಹಬ್ಬಗಳು-ಜಾತ್ರೆಗಳು ಎಂದಾಗ ಎಲ್ಲರ ಮುಖದಲ್ಲೊಮ್ಮೆ ಸಣ್ಣ ನಗೆ ಮೂಡುತ್ತದೆ.ನೂರಾರು ನೆನಪುಗಳು  ತೂರಿಕೊಂಡು ಬಂದು ಕಣ್ಣ ಮುಂದೆ ಕುಣಿಯತೊಡಗುತ್ತವೆ.ಅದರಲ್ಲೂ ಸ್ವಂತ ಊರಿನಿಂದ ಹೊರಗಿರುವವರಿಗೆ ಅಥವಾ ಹಬ್ಬಕ್ಕೆ ಊರಿಗೆ ಹೋಗಿ ಕುಟುಂಬದ ಜೊತೆ ಕಾಲ ಕಳೆಯುವ ಅವಕಾಶದಿಂದ ವಂಚಿತರಾದವರಿಗೆ ಇದು ಸ್ವಲ್ಪ ಹೆಚ್ಚೇ ಎನ್ನಬಹುದು.ಇಂತಹ ದುರದೃಷ್ಟವನ್ನು ಯಾರಲ್ಲಿ ಹೇಳಿಕೊಳ್ಳುವುದು?ಅಂತಹ ದುರದೃಷ್ಟವಂತರೆಲ್ಲಾ ಒಂದೆಡೆ ಕುಳಿತು ಆಡುವ ವಿಷಾದದ ನಾಲ್ಕು ಮಾತುಗಳಲ್ಲೇ ಹಬ್ಬ ಮುಗಿದಿರುತ್ತದೆ.ಊರಿನಿಂದ ದೂರಾಗಿ ಮೈಸೂರಿಗೆ ಬಂದ ನಾನೂ ಇದಕ್ಕೆ ಹೊರತೇನಲ್ಲ.ಈ ಸಂದರ್ಭಗಳಲ್ಲಿ ಊರಿನಿಂದ ಹೊರಗಿರುವ ವೇದನೆ ಹೊರಗೆ ಬರುತ್ತದೆ.ಮನಸ್ಸು ಸಹಜವಾಗಿಯೇ ಬಾಲ್ಯದೆಡೆಗೆ ಹೊರಳುತ್ತದೆ;ನೆನಪುಗಳು ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತವೆ...
               ಮಲೆನಾಡಿನ ಮಕ್ಕಳಾದ ನಮಗೆ ಸಾಮಾನ್ಯವಾಗಿ ಉಳಿದೆಲ್ಲಾ ಹಬ್ಬಗಳಿಗಿಂತ ದೀಪಾವಳಿಯ ಮೇಲೆ ವಿಶೇಷ ಪ್ರೀತಿ.ಅದಕ್ಕೆ ಕಾರಣವೂ ಇಲ್ಲದಿಲ್ಲ.ಉಳಿದವುಗಳಲ್ಲಿ ನಮ್ಮ ಕುಣಿದಾಟಗಳಿಗೆ ಹೆಚ್ಚಿನ ಆಸ್ಪದವಿಲ್ಲ.ಸಹಜ ಗುಣಗಳಾದ ಆಟ,ಕೋಪ,ಚೇಷ್ಟೆ.....ಊಹ್ಞೂಂ...ಕೇವಲ ಹೊಸ ಉಡುಗೆಗಳನ್ನು ತೊಟ್ಟು ಮುಗಿಸುವ ಹಬ್ಬವಲ್ಲವಲ್ಲಾ ಇದು... ಮನೆಯವರೊಂದಿಗೆ ನಮ್ಮ ಬೇಡಿಕೆ ಸಲ್ಲಿಸುವುದಕ್ಕೆ,ಅದನ್ನು ಈಡೇರಿಸಿಕೊಳ್ಳುವುದಕ್ಕಾಗಿ ಹಠ ಮಾಡುವುದಕ್ಕೆ,ಮುನಿಸಿಕೊಳ್ಳುವುದಕ್ಕೆ ಇದಕ್ಕಿಂತ ಉನ್ನತವಾದ ಹಬ್ಬ ನಮಗೆ ಸಿಗಲಾರದು.
               ನಕ್ಷತ್ರ ಕಡ್ಡಿಯಿಂದ ತೊಡಗಿ ನಮ್ಮ ನಮ್ಮ ಧೈರ್ಯ-ಸಾಮರ್ಥ್ಯದ ಮೇಲೆ ಪಟಾಕಿಗಳ ಬೇಡಿಕೆ ಸಲ್ಲಿಕೆಯಾಗುತ್ತಿತ್ತು.ನಾನೂ ಸಹ ಹೊಡೆಯುವ ಧೈರ್ಯವಿಲ್ಲದಿದ್ದರೂ ಪಟ್ಟಿ ದೊಡ್ಡದೇ ಕೊಡುತ್ತಿದ್ದೆ.ಆದರೆ ಅಪ್ಪ ತರುತ್ತಿದ್ದುದು ಮಾತ್ರ ನನ್ನ ಸಾಮರ್ಥ್ಯಕ್ಕೆ ತಕ್ಕಂತೆಯೇ;ನನ್ನ ಧೈರ್ಯ ಎಷ್ಟೆಂದು ಅಪ್ಪನವರಿಗೆ ತಿಳಿಯದಿದ್ದುದೇ!? ತಂದದ್ದರಲ್ಲೇ ತಂಗಿಯೊಡನೆ,ಅಣ್ಣನೊಡನೆ ಕಿತ್ತಾಡಿ ನನ್ನ ಪಾಲನ್ನು ಪಡೆದು ಹೆಮ್ಮೆಯಿಂದ ಹೊಡೆಯುತ್ತಿದ್ದೆ.
               ದೀಪಾವಳಿಯ ನೆನಪು ಇಷ್ಟೇ ಆಗಿದ್ದರೆ ಮಾಮೂಲಿ ಹಬ್ಬವೆಂದೆನಿಸುತ್ತಿತ್ತು.ವಿಶೇಷವೆಂದಿನಿಸುವುದು ಅದರ ಆಚರಣೆಗಳಲ್ಲಿ...ನೀರು ತುಂಬಿಸುವ ಹಬ್ಬದಿಂದ ಮೊದಲ್ಗೊಂಡು ಬಲಿಪಾಡ್ಯಮಿಯವರೆಗೂ ಆಚರಿಸುವ ಆಚರಣೆಗಳು ಮನದಲ್ಲಿ ಅಗ್ರ ಸ್ಥಾನವನ್ನು ಪಡೆದಿವೆ.ಅವುಗಳನ್ನು ಬಿಡಿ-ಬಿಡಿಯಾಗಿ ತೆರೆದಿಡುವ ಪ್ರಯತ್ನ ನನ್ನದು...

ಮೊದಲ ದಿನ : 
           ನೀರು ತುಂಬುವ ಹಬ್ಬ,ಬೂದುಗಳ ಹಬ್ಬ
             
                   ಮೊದಲ ದಿನದ ಈ ಹಬ್ಬ ಮನೆಯಲ್ಲಿರುವ ಬೀರು,ಕಡೆಕಲ್ಲು ಮುಂತಾದವುಗಳಿಗೆ ಪೂಜೆ ಮಾಡುವುದರಿಂದ ಮೊದಲ್ಗೊಳ್ಳುವುದು.ನೀರು ತುಂಬುವ ಹಬ್ಬ ಸಾಮಾನ್ಯವಾಗಿ ಎಲ್ಲೆಡೆ ನಡೆಯುವಂತೆಯೇ ನಮ್ಮಲ್ಲಿಯೂ ನಡೆಯುವುದು.ಹಂಡೆಗೆ ಹಿಂಡ್ಲೆ ಬಳ್ಳಿಯನ್ನು ಸುತ್ತಿರುತ್ತಾರೆ.ನಂತರ ಹಂಡೆಗೆ ನೀರು ತುಂಬಿಸುವುದು ಇತ್ಯಾದಿಗಳು ನಡೆಯುತ್ತವೆ.ನಮ್ಮ ಕಡೆ ಈ ದಿನದ ವಿಶೇಷ ಕಡುಬು ಮಾಡುವುದು;ಚೀನೀಕಾಯಿಯದ್ದು.ಅಷ್ಟೇನೂ ಇಷ್ಟವಾಗದ ನನಗೆ ಇದನ್ನು ತಿನ್ನುವುದೇ ದೊಡ್ಡ ಸಾಧನೆಯಾಗಿತ್ತು.ಇದೆಲ್ಲವುಗಳಿಗಿಂತಲೂ ನನಗೆ ಆಸಕ್ತಿ ಇರುತ್ತಿದ್ದುದು ಮತ್ತೊಂದರಲ್ಲಿ.
                ನಮ್ಮ ಕಡೆ 'ಬೂದು'ಗಳ ಹಬ್ಬ ಎಂದು ಕರೆಯಲ್ಪಡುವ ಹಬ್ಬವೇ ಈ ದಿನದ ಕೇಂದ್ರ ಬಿಂದು.(ವಾಸ್ತವವಾಗಿ 'ಬೂದುಗಳವು' ಎಂದಾಗಬೇಕು ಅನಿಸುತ್ತದೆ.ಆದರೆ ಆಡು ಭಾಷೆಯಲ್ಲಿ 'ಬೂದುಗಳು' ಎಂದೇ ಇರುವುದರಿಂದ ಹಾಗೆಯೇ ಪದ ಪ್ರಯೋಗ ಮಾಡುತ್ತೇನೆ). 'ಬೂದು'ಗಳ ಹಬ್ಬ ಎಂದರೆ ಅಧಿಕೃತ ಕಳ್ಳತನವೆನ್ನಬಹುದು;ಆದರೆ ಕದಿಯುವವ ಮಾತ್ರ ಈ ದಿನದ ಮಟ್ಟಿಗೆ ಕಳ್ಳನಾಗಲಾರ.ಅವರು ಕದಿಯುವ ವಸ್ತುಗಳನ್ನು ಮತ್ತೊಬ್ಬರ ಮನೆಗೆ ಕೊಂಡು ಹೋಗಿ ಇಟ್ಟುಬಿಡುತ್ತಾರೆ,ತಾವು ಒಯ್ಯುವುದಿಲ್ಲ.ಮತ್ತೊಬ್ಬರ ಮನೆಯದ್ದು ಮತ್ತೆಲ್ಲೋ...ಹಾಗಾಗಿಯೇ ಈ ದಿನ ಎಲ್ಲಾ ಮನೆಗಳಲ್ಲಿ ಗಸ್ತು ತಿರುಗುವುದು ಸಾಮಾನ್ಯ.'ಬೂದು' ಮಾಡುವವರು ಮಾತ್ರ ಯಾರ ಬಳಿಯೂ ಸಿಕ್ಕಿ ಬೀಳಬಾರದು,ಇದು ಅಲಿಖಿತ ನಿಯಮ.
                ಆದರೆ ಮಾರನೇ ದಿನ ಎದ್ದು ನೋಡಿದಾಗ ಮನೆಯ ಎದುರಿನ ತುಳಸೀ ಕಟ್ಟೆಯ ಬಳಿ ತೆಂಗಿನ ಕಾಯಿಯೋ,ಸೌತೇಕಾಯಿಯೋ,ಬೇರೆಯವರ ಮನೆಯ ಪಾತ್ರೆಯೋ ಇರುತ್ತದೆ.ಹಾಗೆಯೇ ನಮ್ಮ ಮನೆಯದ್ದೂ ಸಹ ಬೇರೆಲ್ಲೋ ಸೇರಿರಲೂಬಹುದು.ಇವುಗಳಲ್ಲಿ ಬಹಳಷ್ಟು ಕತೆಯಾಗಿಯೂ ಹೋಗಿಬಿಡುತ್ತವೆ;ಒಂದಷ್ಟು ದಿನದ ಮಟ್ಟಿಗೆ ಮಾತನ್ನಾಡಲು ಸರಕನ್ನೂ ಈ ಹಬ್ಬ ಒದಗಿಸುತ್ತದೆ.
               ಬೂದುಗಳ ಹಬ್ಬದ ಬಗ್ಗೆ ಅಜ್ಜಿ  ತಮ್ಮದೇ ಅನುಭವಗಳನ್ನು ಹೇಳುತ್ತಿದ್ದರು. ಒಮ್ಮೆ ಅಜ್ಜಿ ಬೂದುಗಳ ಹಬ್ಬದ ಮಾರನೇ ದಿನ ಬೆಳಗ್ಗೆ ಹಾಲು ಕರೆಯಲೆಂದು ಕೊಟ್ಟಿಗೆಗೆ ಹೋದಾಗ ಯಾವ ದನವೂ ಹಾಲು ಕೊಡಲೇ ಇಲ್ಲ...! ಆದರೆ ಕರುಗಳೆಲ್ಲಾ ಬಾಯಿ ಚಪ್ಪರಿಸುತ್ತಾ,ಮೆಲುಕು ಹಾಕುತ್ತಿದ್ದವು. ಆಗಲೇ ಅವರಿಗೆ ಅಂದಾಜಾದದ್ದು;ಯಾರೋ ಸರಿಯಾಗಿಯೇ 'ಬೂದು' ಮಾಡಿದ್ದಾರೆ ಎಂದು.ಯಾರು ಎನ್ನುವುದೂ ಸ್ವಲ್ಪ ಸಮಯದ ಬಳಿಕ ತಿಳಿಯಿತಂತೆ.ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದ,ನನ್ನನ್ನೂ ಸಹ ಆಡಿಸಿ,ನಲಿಸುತ್ತಿದ್ದ ಓರ್ವರೆಂದು. ರಾತ್ರಿ ಕೊಟ್ಟಿಗೆಗೆ ಹೋಗಿ ಕರುಗಳನ್ನು ಹಾಲು ಕುಡಿಯಲು ಬಿಟ್ಟು ಬೆಳಗಿನ ಜಾವದಲ್ಲಿ ಅವುಗಳನ್ನು ಕಟ್ಟಿ ಅವರು ಹೋಗಿದ್ದರು.ಆದರೆ ಏನೂ ಮಾಡುವ ಹಾಗಿಲ್ಲವಲ್ಲ ಎನ್ನುತ್ತಾ ಈ ಘಟನೆ ಜೀವಮಾನವಿಡೀ ನೆನೆಸಿಕೊಂಡು ನಗುವ ಸರಕಿನ ಜೋಳಿಗೆಯಲ್ಲಿ ಸೇರಿ ಹೋಯಿತು ಎಂದು ಅಜ್ಜಿ ಹೇಳುವಾಗ ಮೊಮ್ಮಕ್ಕಳಾದ ನಮಗೆಲ್ಲರಿಗೂ ಒಂದು ಹುರುಪು ಬರುತ್ತಿತ್ತು.ನಾವೂ ಈ ಬಾರಿ ಏನಾದರೂ ಮಾಡಬೇಕೆಂದು.
               ನನಗೆ ಮತ್ತು ನನ್ನ ಅಣ್ಣನಿಗೆ ಈ ಹಬ್ಬದ ಉಮೇದು ಬಹಳ.ಒಮ್ಮೆ , ಈ ಬಾರಿಯಾದರೂ ಏನಾದರೂ ಮಾಡಲೇಬೇಕೆಂದು ತೀರ್ಮಾನಿಸಿದೆವು.ಆದರೆ ಮನೆಯಲ್ಲಿ ರಾತ್ರಿ ಹೊರಗೆ ಎಲ್ಲೂ ಕಳಿಸುತ್ತಿರಲಿಲ್ಲ. ಟಿ.ವಿ. ನೋಡಿ ಬರುತ್ತೇವೆಂದು ಹೇಳಿ ಆ ದಿನದ ಮಧ್ಯಾಹ್ನವೇ ಹೊರಟು ಬಿಟ್ಟೆವು.ಅಕ್ಕಪಕ್ಕದಲ್ಲಿ ಮನೆಗಳು ವಿರಳವಾದ್ದರಿಂದ ಸ್ವಲ್ಪ ದೂರ ನಡೆಯಬೇಕಾಗಿತ್ತು.ಹೊರನಾಡಿಗೆ ಹೋಗುವ ದಾರಿಯ ಪಕ್ಕದಲ್ಲೇ ಸಾಗುವ ಮಾರ್ಗ ಅದು. ಟಿ.ವಿ. ನೋಡಲು ಹೋಗುವಾಗ ಸುಮ್ಮನೆ ಹೋದೆವು.ಸಂಜೆ ಕತ್ತಲಾಗುವ ಸ್ವಲ್ಪ ಮುಂಚೆ ಅಲ್ಲಿಂದ ಹೊರಟು,ಮುಖ್ಯ ರಸ್ತೆ ಮಾರ್ಗವಾಗಿಯೇ ಬರುತ್ತಾ ಮೊದಲೇ ಯೋಚಿಸಿದಂತೆ ದಾರಿಗೆ ಅಡ್ಡಲಾಗಿ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದೊಡ್ಡ ದೊಡ್ಡ ಕಲ್ಲುಗಳನ್ನು ಹೊತ್ತುಕೊಂಡು ಹೋಗಿ ಇಟ್ಟೆವು;ಯಾರೂ ನೋಡದಿದ್ದುದನ್ನು ಖಾತರಿ ಪಡಿಸಿಕೊಂಡು.ಇದಕ್ಕೆ ಹಿನ್ನೆಲೆಯೂ ಇದೆ.
                ಒಮ್ಮೆ ನಾವು ಶಾಲೆಗೆ ಹೋಗುವಾಗ ಬಸ್ಸಿನಲ್ಲಿ ಡ್ರೈವರ್  ಯಾರೊಡನೆಯೋ ಮಾತನಾಡುತ್ತಿದ್ದರು." 'ಬೂದು'ಗಳ ಹಬ್ಬದ್ದು ಭಯಂಕರ ಉಪದ್ರ ಮಾರಾಯ್ರೆ;ದಾರಿ ತುಂಬಾ ಕಲ್ಲು ಇಡುದು.ನಾವು ಎಲ್ಲಾ ತೆಗ್ದು ಬದಿಗೆ ಹಾಕಿ ಬರೋಷ್ಟೊತ್ತಿಗೆ ಸಾಕು ಸಾಕಾಗುತ್ತೆ "ಅಂತ. ಆಗಲೇ ನಾವು ತೀರ್ಮಾನಿಸಿಬಿಟ್ಟಿದ್ದೆವು; ನಮಗೆ ಸಾಧ್ಯವಾಗುವಂತಹದ್ದು ಇದೊಂದೇ ಎಂದು .
                 ಕಲ್ಲುಗಳನ್ನು ಇಟ್ಟು ಏನೋ ಸಾಧಿಸಿದ ಭಾವದಿಂದ ಮನೆ ಸೇರಿಕೊಂಡೆವು.ನಂತರ ನೀರು ತುಂಬುವ ಹಬ್ಬ ಮಾಡಿ ಚೀನೀಕಾಯಿ ಕಡುಬು ತಿಂದು ಮಲಗಿದೆವು;ಆ ದಿನದ ಮಹಾನ್ ಸಾಧನೆಯನ್ನು ನೆನೆಸಿಕೊಳ್ಳುತ್ತಾ...
                ಬೆಳಗ್ಗೆ ಕಣ್ಣು ಬಿಟ್ಟಾಗ ಮನೆಗೆ ಬಂದವರ್ಯಾರೋ ಮಾತನಾಡುವುದು ಕೇಳಿಸುತ್ತಿತ್ತು."ನಿನ್ನೆ ಭಾರಿ ಹಬ್ಬ ಮಾಡ್ದರೆ ಹೋಯ್...ಇಲ್ಲೆ ಕೆಳ್ಗೆ ಹೊರ್ನಾಡಿಗೆ ಹೋಗೋ ದಾರಿಲಿ ಕಲ್ಲು ಹಾಕಿಟ್ದರೆ...ಯಾರೇನ..?ನನ್ಗೆ ಈಗ ಅದ್ನೆಲ್ಲಾ ತೆಗ್ದ್ ಹಾಕಿ ಬರುದೇ ಒಂದು ಕೆಲ್ಸ ಆತು ಗೊತ್ತಾ...ಆದ್ರೆ ನಮ್ಮನೇಲಿ ಯಾರೂ 'ಬೂದು' ಮಾಡ್ಲ"ಎನ್ನುತ್ತಿದ್ದಾಗ ಭಯ,ಖುಷಿ ಎರಡೂ ಆಗುತ್ತಿತ್ತು.ನಮಗೆ ನಾವೇ ಹೆಮ್ಮೆ ಪಟ್ಟುಕೊಳ್ಳುತ್ತಾ ಒಲೆ ಬುಡದಲ್ಲಿ ಕೂತು ನಾನು, ಅಣ್ಣ ಕಾಫಿ ಹೀರುತ್ತಿದ್ದೆವು.ಅಂದಿನ ಹಬ್ಬಕ್ಕೆ ತಯಾರಾಗುತ್ತಾ.....    
                                                                                                  

Saturday 26 September 2015

ಹಣತೆ


ಜಿ.ಎಸ್.ಶಿವರುದ್ರಪ್ಪ
ಹಣತೆ ಹಚ್ಚುತ್ತೇನೆ ನಾನೂ
ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ;
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಮೆ ನನಗಿಲ್ಲ

ಹಣತೆ ಹಚ್ಚುತ್ತೇನೆ ನಾನೂ;
ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ
ಆಸೆಯಿಂದಲ್ಲ.
ಕತ್ತಲಿನಿಂದ ಕತ್ತಲೆಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ
ಶತಮಾನದಿಂದಲೂ,

ನಡುನಡುವೆ ಒಂದಷ್ಟು ಬೆಳಕು ಬೇಕೆಂದು
ಆಗಾಗ ಕಡ್ಡಿ ಗೀಚಿದ್ದೇವೆ,
ದೀಪ ಮೂಡಿಸಿದ್ದೇವೆ,
ವೇದ,ಶಾಸ್ತ್ರ,ಪುರಾಣ,ಇತಿಹಾಸ,ಕಾವ್ಯ,ವಿಜ್ಞಾನಗಳ
ಮತಾಪು-ಪಟಾಕಿ-ಸುರು ಸುರುಬತ್ತಿ-ಹೂ ಬಾಣ
ಸುಟ್ಟಿದ್ದೇವೆ.
'ತಮಸೋಮ ಜ್ಯೋತಿರ್ಗಮಯ' ಎನ್ನುತ್ತಾ ಬರೀ
ಬೂದಿಯನ್ನೇ ಕೊನೆಗೆ ಕಂಡಿದ್ದೇವೆ

ನನಗೂ ಗೊತ್ತು,ಈ ಕತ್ತಲಿಗೆ
ಕೊನೆಯಿರದ ಬಾಯಾರಿಕೆ.
ಎಷ್ಟೊಂದು ಬೆಳಕನ್ನು ಇದು ಉಟ್ಟರೂ,ತೊಟ್ಟರೂ
ತಿಂದರೂ,ಕುಡಿದರೂ ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನು ಬಯಕೆ

ಆದರೂ ಹಣತೆ ಹಚ್ಚುತ್ತೇನೆ ನಾನೂ;
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು,ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ
ಹಣತೆ ಬೇಗ ಆರಿದ ಮೇಲೆ,ನೀನು ಯಾರೋ, ಮತ್ತೆ
ನಾನು ಯಾರೋ.
                     

         
                                                    

                                                       ************

  { ವಾಸ್ತವತೆಯನ್ನು ಪ್ರತಿಪಾದಿಸುವ ಈ ಕವಿತೆ ನಮ್ಮ ಪಠ್ಯದಲ್ಲಿದೆ. ಇದನ್ನು ಓದಿದ ನಂತರ ಯಾಕೋ ಬಹಳ ಕಾಡತೊಡಗಿತು,ಹಂಚಿಕೊಳ್ಳಬೇಕೆನಿಸಿತು. . }

Tuesday 22 September 2015

ಬರೆಯುವುದೇಕೆ???

ಬರೆಯುವುದೇಕೆ???

       
     ಹೌದು,ನಾನೇಕೆ ಬರೆಯಬೇಕು?
 ನಾವು ಬೆಳೆಯುತ್ತಾ ಹೋದಂತೆ ಜ್ಞಾನವನ್ನೂ , ಗತಿಸಿದ ಕಾಲದಿಂದ ಅನುಭವಗಳನ್ನೂ ಪಡೆಯುತ್ತಿರುತ್ತೇವೆ.ಇದೊಂದು ನಿರಂತರ ಪ್ರಕ್ರಿಯೆ.ಹೀಗೆ ಬೆಳೆಯುವ ವ್ಯಕ್ತಿತ್ವದ ಮಾಪನವನ್ನು ಹಾಗೂ ಬದಲಾದ ಅಥವಾ ಬದಲಾಗುವ ಮಾನಸಿಕತೆಯ ತೋರ್ಪಡಿಕೆಯನ್ನು ನಮ್ಮ ಬರವಣಿಗೆಯಲ್ಲೂ ಕಾಣಬಹುದು.
              ಇದೇ ಮಾಧ್ಯಮವನ್ನು ಬಳಸಿಕೊಂಡು ಗತಿಸಿದ ಕಾಲಕ್ಕೆ ಬಣ್ಣ ಹಚ್ಚಿ, 'ಅಲಂಕರಿಸಿ' ತಂದು ಕೂರಿಸುವ ಯತ್ನ ಇದು.  ಇದರೊಂದಿಗೆ ಕನಸುಗಳನ್ನೂ,ಕಲ್ಪನೆಗಳನ್ನೂ ...! ಯಾವ ರೂಪದಲ್ಲಿ...?ಕತೆಯೋ,ಕವಿತೆಯೋ,ಪ್ರಬಂಧವೋ,ಚುಟುಕೋ...ಇಂಥದ್ದೇ ಪ್ರಕಾರದಲ್ಲಿ ಬರೆಯಬೇಕೆಂಬ ನಿರ್ದಿಷ್ಟತೆಯ ಬಗ್ಗೆ ಇನ್ನೂ ಯೋಚಿಸಿಲ್ಲವಾದ್ದರಿಂದ ಯಾವ ರೂಪದಲ್ಲೂ ಇದ್ದೀತು...ನೆಚ್ಚಿನ ಮತ್ತೊಂದು ಮಾಧ್ಯಮವಾದ ಛಾಯಾಚಿತ್ರವೂ ಸೇರಿದಂತೆ!
               ಇಲ್ಲಿ ರೂಪುಗೊಳ್ಳುವ ಎಲ್ಲವೂ ಆಯಾ ಕ್ಷಣಗಳಲ್ಲಿ ನಾನಿದ್ದ ಮನಸ್ಥಿತಿಯ ರೂಪ.ಅದೇ ಮನಸ್ಥಿತಿ ನನ್ನ ಬದುಕಿನಲ್ಲಿ ಶಾಶ್ವತವೆಂದು ಹೇಳಲಾರೆ.ಆದರೆ ಆ ಸಮಯದಲ್ಲಿ ನಾನು ಅನುಭವಿಸಿದ ಭಾವ ಮತ್ತು ಅದರಿಂದ ಕಲಿತ ಪಾಠ ಅವುಗಳು ಮಾತ್ರ ಸತ್ಯವಾದದ್ದು.
              ಹೀಗೆ ಜೀವನ ಪಾಠಗಳ ಕಲಿಕೆ ಸಾಗುತ್ತಲೇ ಇರುವುದರಿಂದ ಯಾವುದಾದರೂ ಒಂದು ನಿರ್ದಿಷ್ಟ ತತ್ವಕ್ಕೆ ನಾನು ಬಧ್ಧ ಎಂದು ಹೇಳಲಾರೆ.ಬದಲಾವಣೆ ಅನ್ನುವಂಥದ್ದು ಬಾಹ್ಯದೊಂದಿಗೆ ಆಂತರ್ಯದಲ್ಲೂ ನಡೆದರೆ ಸೊಗಸಲ್ಲವೇ..?
               ಇನ್ನು ಎಲ್ಲರಂತೆ ಭವಿಷ್ಯದ ಬಗೆಗೂ ನೂರಾರು ಕನಸುಗಳಿವೆ.ಅವುಗಳನ್ನು ಹಂಚಿಕೊಳ್ಳಬೇಕೆಂಬ ಮನಸ್ಸೂ ಇದೆ.ಅದಕ್ಕೆ ಪ್ರಬಲವಾದ ಒಂದು ಮಾಧ್ಯಮವಾಗಿ ಬರವಣಿಗೆ ನಿಲ್ಲಬಲ್ಲದು ಎಂಬ ನಂಬಿಕೆ ನನ್ನದು. ಈ ದೀರ್ಘ ಪಯಣದಲ್ಲಿ ನೀವೆಲ್ಲಾ ನನ್ನ ಜೊತೆಗೆ ಸಾಗುತ್ತೀರೆಂಬ ನಂಬಿಕೆಯೊಂದಿಗೆ,
                                                         -ಶಿವಪ್ರಸಾದ್ ಹಳುವಳ್ಳಿ...