Tuesday 10 November 2015

ದೀಪಾವಳಿಯ ಸ್ಮೃತಿಯಲ್ಲಿ.....೧

                   



                 ಹಬ್ಬಗಳು-ಜಾತ್ರೆಗಳು ಎಂದಾಗ ಎಲ್ಲರ ಮುಖದಲ್ಲೊಮ್ಮೆ ಸಣ್ಣ ನಗೆ ಮೂಡುತ್ತದೆ.ನೂರಾರು ನೆನಪುಗಳು  ತೂರಿಕೊಂಡು ಬಂದು ಕಣ್ಣ ಮುಂದೆ ಕುಣಿಯತೊಡಗುತ್ತವೆ.ಅದರಲ್ಲೂ ಸ್ವಂತ ಊರಿನಿಂದ ಹೊರಗಿರುವವರಿಗೆ ಅಥವಾ ಹಬ್ಬಕ್ಕೆ ಊರಿಗೆ ಹೋಗಿ ಕುಟುಂಬದ ಜೊತೆ ಕಾಲ ಕಳೆಯುವ ಅವಕಾಶದಿಂದ ವಂಚಿತರಾದವರಿಗೆ ಇದು ಸ್ವಲ್ಪ ಹೆಚ್ಚೇ ಎನ್ನಬಹುದು.ಇಂತಹ ದುರದೃಷ್ಟವನ್ನು ಯಾರಲ್ಲಿ ಹೇಳಿಕೊಳ್ಳುವುದು?ಅಂತಹ ದುರದೃಷ್ಟವಂತರೆಲ್ಲಾ ಒಂದೆಡೆ ಕುಳಿತು ಆಡುವ ವಿಷಾದದ ನಾಲ್ಕು ಮಾತುಗಳಲ್ಲೇ ಹಬ್ಬ ಮುಗಿದಿರುತ್ತದೆ.ಊರಿನಿಂದ ದೂರಾಗಿ ಮೈಸೂರಿಗೆ ಬಂದ ನಾನೂ ಇದಕ್ಕೆ ಹೊರತೇನಲ್ಲ.ಈ ಸಂದರ್ಭಗಳಲ್ಲಿ ಊರಿನಿಂದ ಹೊರಗಿರುವ ವೇದನೆ ಹೊರಗೆ ಬರುತ್ತದೆ.ಮನಸ್ಸು ಸಹಜವಾಗಿಯೇ ಬಾಲ್ಯದೆಡೆಗೆ ಹೊರಳುತ್ತದೆ;ನೆನಪುಗಳು ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತವೆ...
               ಮಲೆನಾಡಿನ ಮಕ್ಕಳಾದ ನಮಗೆ ಸಾಮಾನ್ಯವಾಗಿ ಉಳಿದೆಲ್ಲಾ ಹಬ್ಬಗಳಿಗಿಂತ ದೀಪಾವಳಿಯ ಮೇಲೆ ವಿಶೇಷ ಪ್ರೀತಿ.ಅದಕ್ಕೆ ಕಾರಣವೂ ಇಲ್ಲದಿಲ್ಲ.ಉಳಿದವುಗಳಲ್ಲಿ ನಮ್ಮ ಕುಣಿದಾಟಗಳಿಗೆ ಹೆಚ್ಚಿನ ಆಸ್ಪದವಿಲ್ಲ.ಸಹಜ ಗುಣಗಳಾದ ಆಟ,ಕೋಪ,ಚೇಷ್ಟೆ.....ಊಹ್ಞೂಂ...ಕೇವಲ ಹೊಸ ಉಡುಗೆಗಳನ್ನು ತೊಟ್ಟು ಮುಗಿಸುವ ಹಬ್ಬವಲ್ಲವಲ್ಲಾ ಇದು... ಮನೆಯವರೊಂದಿಗೆ ನಮ್ಮ ಬೇಡಿಕೆ ಸಲ್ಲಿಸುವುದಕ್ಕೆ,ಅದನ್ನು ಈಡೇರಿಸಿಕೊಳ್ಳುವುದಕ್ಕಾಗಿ ಹಠ ಮಾಡುವುದಕ್ಕೆ,ಮುನಿಸಿಕೊಳ್ಳುವುದಕ್ಕೆ ಇದಕ್ಕಿಂತ ಉನ್ನತವಾದ ಹಬ್ಬ ನಮಗೆ ಸಿಗಲಾರದು.
               ನಕ್ಷತ್ರ ಕಡ್ಡಿಯಿಂದ ತೊಡಗಿ ನಮ್ಮ ನಮ್ಮ ಧೈರ್ಯ-ಸಾಮರ್ಥ್ಯದ ಮೇಲೆ ಪಟಾಕಿಗಳ ಬೇಡಿಕೆ ಸಲ್ಲಿಕೆಯಾಗುತ್ತಿತ್ತು.ನಾನೂ ಸಹ ಹೊಡೆಯುವ ಧೈರ್ಯವಿಲ್ಲದಿದ್ದರೂ ಪಟ್ಟಿ ದೊಡ್ಡದೇ ಕೊಡುತ್ತಿದ್ದೆ.ಆದರೆ ಅಪ್ಪ ತರುತ್ತಿದ್ದುದು ಮಾತ್ರ ನನ್ನ ಸಾಮರ್ಥ್ಯಕ್ಕೆ ತಕ್ಕಂತೆಯೇ;ನನ್ನ ಧೈರ್ಯ ಎಷ್ಟೆಂದು ಅಪ್ಪನವರಿಗೆ ತಿಳಿಯದಿದ್ದುದೇ!? ತಂದದ್ದರಲ್ಲೇ ತಂಗಿಯೊಡನೆ,ಅಣ್ಣನೊಡನೆ ಕಿತ್ತಾಡಿ ನನ್ನ ಪಾಲನ್ನು ಪಡೆದು ಹೆಮ್ಮೆಯಿಂದ ಹೊಡೆಯುತ್ತಿದ್ದೆ.
               ದೀಪಾವಳಿಯ ನೆನಪು ಇಷ್ಟೇ ಆಗಿದ್ದರೆ ಮಾಮೂಲಿ ಹಬ್ಬವೆಂದೆನಿಸುತ್ತಿತ್ತು.ವಿಶೇಷವೆಂದಿನಿಸುವುದು ಅದರ ಆಚರಣೆಗಳಲ್ಲಿ...ನೀರು ತುಂಬಿಸುವ ಹಬ್ಬದಿಂದ ಮೊದಲ್ಗೊಂಡು ಬಲಿಪಾಡ್ಯಮಿಯವರೆಗೂ ಆಚರಿಸುವ ಆಚರಣೆಗಳು ಮನದಲ್ಲಿ ಅಗ್ರ ಸ್ಥಾನವನ್ನು ಪಡೆದಿವೆ.ಅವುಗಳನ್ನು ಬಿಡಿ-ಬಿಡಿಯಾಗಿ ತೆರೆದಿಡುವ ಪ್ರಯತ್ನ ನನ್ನದು...

ಮೊದಲ ದಿನ : 
           ನೀರು ತುಂಬುವ ಹಬ್ಬ,ಬೂದುಗಳ ಹಬ್ಬ
             
                   ಮೊದಲ ದಿನದ ಈ ಹಬ್ಬ ಮನೆಯಲ್ಲಿರುವ ಬೀರು,ಕಡೆಕಲ್ಲು ಮುಂತಾದವುಗಳಿಗೆ ಪೂಜೆ ಮಾಡುವುದರಿಂದ ಮೊದಲ್ಗೊಳ್ಳುವುದು.ನೀರು ತುಂಬುವ ಹಬ್ಬ ಸಾಮಾನ್ಯವಾಗಿ ಎಲ್ಲೆಡೆ ನಡೆಯುವಂತೆಯೇ ನಮ್ಮಲ್ಲಿಯೂ ನಡೆಯುವುದು.ಹಂಡೆಗೆ ಹಿಂಡ್ಲೆ ಬಳ್ಳಿಯನ್ನು ಸುತ್ತಿರುತ್ತಾರೆ.ನಂತರ ಹಂಡೆಗೆ ನೀರು ತುಂಬಿಸುವುದು ಇತ್ಯಾದಿಗಳು ನಡೆಯುತ್ತವೆ.ನಮ್ಮ ಕಡೆ ಈ ದಿನದ ವಿಶೇಷ ಕಡುಬು ಮಾಡುವುದು;ಚೀನೀಕಾಯಿಯದ್ದು.ಅಷ್ಟೇನೂ ಇಷ್ಟವಾಗದ ನನಗೆ ಇದನ್ನು ತಿನ್ನುವುದೇ ದೊಡ್ಡ ಸಾಧನೆಯಾಗಿತ್ತು.ಇದೆಲ್ಲವುಗಳಿಗಿಂತಲೂ ನನಗೆ ಆಸಕ್ತಿ ಇರುತ್ತಿದ್ದುದು ಮತ್ತೊಂದರಲ್ಲಿ.
                ನಮ್ಮ ಕಡೆ 'ಬೂದು'ಗಳ ಹಬ್ಬ ಎಂದು ಕರೆಯಲ್ಪಡುವ ಹಬ್ಬವೇ ಈ ದಿನದ ಕೇಂದ್ರ ಬಿಂದು.(ವಾಸ್ತವವಾಗಿ 'ಬೂದುಗಳವು' ಎಂದಾಗಬೇಕು ಅನಿಸುತ್ತದೆ.ಆದರೆ ಆಡು ಭಾಷೆಯಲ್ಲಿ 'ಬೂದುಗಳು' ಎಂದೇ ಇರುವುದರಿಂದ ಹಾಗೆಯೇ ಪದ ಪ್ರಯೋಗ ಮಾಡುತ್ತೇನೆ). 'ಬೂದು'ಗಳ ಹಬ್ಬ ಎಂದರೆ ಅಧಿಕೃತ ಕಳ್ಳತನವೆನ್ನಬಹುದು;ಆದರೆ ಕದಿಯುವವ ಮಾತ್ರ ಈ ದಿನದ ಮಟ್ಟಿಗೆ ಕಳ್ಳನಾಗಲಾರ.ಅವರು ಕದಿಯುವ ವಸ್ತುಗಳನ್ನು ಮತ್ತೊಬ್ಬರ ಮನೆಗೆ ಕೊಂಡು ಹೋಗಿ ಇಟ್ಟುಬಿಡುತ್ತಾರೆ,ತಾವು ಒಯ್ಯುವುದಿಲ್ಲ.ಮತ್ತೊಬ್ಬರ ಮನೆಯದ್ದು ಮತ್ತೆಲ್ಲೋ...ಹಾಗಾಗಿಯೇ ಈ ದಿನ ಎಲ್ಲಾ ಮನೆಗಳಲ್ಲಿ ಗಸ್ತು ತಿರುಗುವುದು ಸಾಮಾನ್ಯ.'ಬೂದು' ಮಾಡುವವರು ಮಾತ್ರ ಯಾರ ಬಳಿಯೂ ಸಿಕ್ಕಿ ಬೀಳಬಾರದು,ಇದು ಅಲಿಖಿತ ನಿಯಮ.
                ಆದರೆ ಮಾರನೇ ದಿನ ಎದ್ದು ನೋಡಿದಾಗ ಮನೆಯ ಎದುರಿನ ತುಳಸೀ ಕಟ್ಟೆಯ ಬಳಿ ತೆಂಗಿನ ಕಾಯಿಯೋ,ಸೌತೇಕಾಯಿಯೋ,ಬೇರೆಯವರ ಮನೆಯ ಪಾತ್ರೆಯೋ ಇರುತ್ತದೆ.ಹಾಗೆಯೇ ನಮ್ಮ ಮನೆಯದ್ದೂ ಸಹ ಬೇರೆಲ್ಲೋ ಸೇರಿರಲೂಬಹುದು.ಇವುಗಳಲ್ಲಿ ಬಹಳಷ್ಟು ಕತೆಯಾಗಿಯೂ ಹೋಗಿಬಿಡುತ್ತವೆ;ಒಂದಷ್ಟು ದಿನದ ಮಟ್ಟಿಗೆ ಮಾತನ್ನಾಡಲು ಸರಕನ್ನೂ ಈ ಹಬ್ಬ ಒದಗಿಸುತ್ತದೆ.
               ಬೂದುಗಳ ಹಬ್ಬದ ಬಗ್ಗೆ ಅಜ್ಜಿ  ತಮ್ಮದೇ ಅನುಭವಗಳನ್ನು ಹೇಳುತ್ತಿದ್ದರು. ಒಮ್ಮೆ ಅಜ್ಜಿ ಬೂದುಗಳ ಹಬ್ಬದ ಮಾರನೇ ದಿನ ಬೆಳಗ್ಗೆ ಹಾಲು ಕರೆಯಲೆಂದು ಕೊಟ್ಟಿಗೆಗೆ ಹೋದಾಗ ಯಾವ ದನವೂ ಹಾಲು ಕೊಡಲೇ ಇಲ್ಲ...! ಆದರೆ ಕರುಗಳೆಲ್ಲಾ ಬಾಯಿ ಚಪ್ಪರಿಸುತ್ತಾ,ಮೆಲುಕು ಹಾಕುತ್ತಿದ್ದವು. ಆಗಲೇ ಅವರಿಗೆ ಅಂದಾಜಾದದ್ದು;ಯಾರೋ ಸರಿಯಾಗಿಯೇ 'ಬೂದು' ಮಾಡಿದ್ದಾರೆ ಎಂದು.ಯಾರು ಎನ್ನುವುದೂ ಸ್ವಲ್ಪ ಸಮಯದ ಬಳಿಕ ತಿಳಿಯಿತಂತೆ.ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದ,ನನ್ನನ್ನೂ ಸಹ ಆಡಿಸಿ,ನಲಿಸುತ್ತಿದ್ದ ಓರ್ವರೆಂದು. ರಾತ್ರಿ ಕೊಟ್ಟಿಗೆಗೆ ಹೋಗಿ ಕರುಗಳನ್ನು ಹಾಲು ಕುಡಿಯಲು ಬಿಟ್ಟು ಬೆಳಗಿನ ಜಾವದಲ್ಲಿ ಅವುಗಳನ್ನು ಕಟ್ಟಿ ಅವರು ಹೋಗಿದ್ದರು.ಆದರೆ ಏನೂ ಮಾಡುವ ಹಾಗಿಲ್ಲವಲ್ಲ ಎನ್ನುತ್ತಾ ಈ ಘಟನೆ ಜೀವಮಾನವಿಡೀ ನೆನೆಸಿಕೊಂಡು ನಗುವ ಸರಕಿನ ಜೋಳಿಗೆಯಲ್ಲಿ ಸೇರಿ ಹೋಯಿತು ಎಂದು ಅಜ್ಜಿ ಹೇಳುವಾಗ ಮೊಮ್ಮಕ್ಕಳಾದ ನಮಗೆಲ್ಲರಿಗೂ ಒಂದು ಹುರುಪು ಬರುತ್ತಿತ್ತು.ನಾವೂ ಈ ಬಾರಿ ಏನಾದರೂ ಮಾಡಬೇಕೆಂದು.
               ನನಗೆ ಮತ್ತು ನನ್ನ ಅಣ್ಣನಿಗೆ ಈ ಹಬ್ಬದ ಉಮೇದು ಬಹಳ.ಒಮ್ಮೆ , ಈ ಬಾರಿಯಾದರೂ ಏನಾದರೂ ಮಾಡಲೇಬೇಕೆಂದು ತೀರ್ಮಾನಿಸಿದೆವು.ಆದರೆ ಮನೆಯಲ್ಲಿ ರಾತ್ರಿ ಹೊರಗೆ ಎಲ್ಲೂ ಕಳಿಸುತ್ತಿರಲಿಲ್ಲ. ಟಿ.ವಿ. ನೋಡಿ ಬರುತ್ತೇವೆಂದು ಹೇಳಿ ಆ ದಿನದ ಮಧ್ಯಾಹ್ನವೇ ಹೊರಟು ಬಿಟ್ಟೆವು.ಅಕ್ಕಪಕ್ಕದಲ್ಲಿ ಮನೆಗಳು ವಿರಳವಾದ್ದರಿಂದ ಸ್ವಲ್ಪ ದೂರ ನಡೆಯಬೇಕಾಗಿತ್ತು.ಹೊರನಾಡಿಗೆ ಹೋಗುವ ದಾರಿಯ ಪಕ್ಕದಲ್ಲೇ ಸಾಗುವ ಮಾರ್ಗ ಅದು. ಟಿ.ವಿ. ನೋಡಲು ಹೋಗುವಾಗ ಸುಮ್ಮನೆ ಹೋದೆವು.ಸಂಜೆ ಕತ್ತಲಾಗುವ ಸ್ವಲ್ಪ ಮುಂಚೆ ಅಲ್ಲಿಂದ ಹೊರಟು,ಮುಖ್ಯ ರಸ್ತೆ ಮಾರ್ಗವಾಗಿಯೇ ಬರುತ್ತಾ ಮೊದಲೇ ಯೋಚಿಸಿದಂತೆ ದಾರಿಗೆ ಅಡ್ಡಲಾಗಿ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದೊಡ್ಡ ದೊಡ್ಡ ಕಲ್ಲುಗಳನ್ನು ಹೊತ್ತುಕೊಂಡು ಹೋಗಿ ಇಟ್ಟೆವು;ಯಾರೂ ನೋಡದಿದ್ದುದನ್ನು ಖಾತರಿ ಪಡಿಸಿಕೊಂಡು.ಇದಕ್ಕೆ ಹಿನ್ನೆಲೆಯೂ ಇದೆ.
                ಒಮ್ಮೆ ನಾವು ಶಾಲೆಗೆ ಹೋಗುವಾಗ ಬಸ್ಸಿನಲ್ಲಿ ಡ್ರೈವರ್  ಯಾರೊಡನೆಯೋ ಮಾತನಾಡುತ್ತಿದ್ದರು." 'ಬೂದು'ಗಳ ಹಬ್ಬದ್ದು ಭಯಂಕರ ಉಪದ್ರ ಮಾರಾಯ್ರೆ;ದಾರಿ ತುಂಬಾ ಕಲ್ಲು ಇಡುದು.ನಾವು ಎಲ್ಲಾ ತೆಗ್ದು ಬದಿಗೆ ಹಾಕಿ ಬರೋಷ್ಟೊತ್ತಿಗೆ ಸಾಕು ಸಾಕಾಗುತ್ತೆ "ಅಂತ. ಆಗಲೇ ನಾವು ತೀರ್ಮಾನಿಸಿಬಿಟ್ಟಿದ್ದೆವು; ನಮಗೆ ಸಾಧ್ಯವಾಗುವಂತಹದ್ದು ಇದೊಂದೇ ಎಂದು .
                 ಕಲ್ಲುಗಳನ್ನು ಇಟ್ಟು ಏನೋ ಸಾಧಿಸಿದ ಭಾವದಿಂದ ಮನೆ ಸೇರಿಕೊಂಡೆವು.ನಂತರ ನೀರು ತುಂಬುವ ಹಬ್ಬ ಮಾಡಿ ಚೀನೀಕಾಯಿ ಕಡುಬು ತಿಂದು ಮಲಗಿದೆವು;ಆ ದಿನದ ಮಹಾನ್ ಸಾಧನೆಯನ್ನು ನೆನೆಸಿಕೊಳ್ಳುತ್ತಾ...
                ಬೆಳಗ್ಗೆ ಕಣ್ಣು ಬಿಟ್ಟಾಗ ಮನೆಗೆ ಬಂದವರ್ಯಾರೋ ಮಾತನಾಡುವುದು ಕೇಳಿಸುತ್ತಿತ್ತು."ನಿನ್ನೆ ಭಾರಿ ಹಬ್ಬ ಮಾಡ್ದರೆ ಹೋಯ್...ಇಲ್ಲೆ ಕೆಳ್ಗೆ ಹೊರ್ನಾಡಿಗೆ ಹೋಗೋ ದಾರಿಲಿ ಕಲ್ಲು ಹಾಕಿಟ್ದರೆ...ಯಾರೇನ..?ನನ್ಗೆ ಈಗ ಅದ್ನೆಲ್ಲಾ ತೆಗ್ದ್ ಹಾಕಿ ಬರುದೇ ಒಂದು ಕೆಲ್ಸ ಆತು ಗೊತ್ತಾ...ಆದ್ರೆ ನಮ್ಮನೇಲಿ ಯಾರೂ 'ಬೂದು' ಮಾಡ್ಲ"ಎನ್ನುತ್ತಿದ್ದಾಗ ಭಯ,ಖುಷಿ ಎರಡೂ ಆಗುತ್ತಿತ್ತು.ನಮಗೆ ನಾವೇ ಹೆಮ್ಮೆ ಪಟ್ಟುಕೊಳ್ಳುತ್ತಾ ಒಲೆ ಬುಡದಲ್ಲಿ ಕೂತು ನಾನು, ಅಣ್ಣ ಕಾಫಿ ಹೀರುತ್ತಿದ್ದೆವು.ಅಂದಿನ ಹಬ್ಬಕ್ಕೆ ತಯಾರಾಗುತ್ತಾ.....    
                                                                                                  

6 comments:

  1. deepavaliya madhura nenapugalu..:) channagide..:)

    ReplyDelete
  2. ತುಂಬಾ ಚೆನ್ನಾಗಿದೆ.... ಬರೆಯುವ potential ಇದೆ. ಆದಷ್ಟು ಬೇಗ ಇನ್ನೊಂದು ಲೇಖನ/ಕಥೆ ಬರಲಿ.

    ReplyDelete
  3. hey good writing ... i like the most .. keep it up
    http://gouthamrati.blogspot.in/p/aageaiaiaza-aiaawpa-aaee-gawuaaa.html

    ReplyDelete