Thursday 19 November 2015

ದೀಪಾವಳಿಯ ಸ್ಮೃತಿಯಲ್ಲಿ.....೨

                         
  ಎರಡನೇ ದಿನ : ಅಭ್ಯಂಗ,ನರಕ ಚತುರ್ದಶಿ...

               "ಅಪ್ಪಯ್ಯ...ಏಳಾ...ನೋಡು,ಎಲ್ರದ್ದು ಸ್ನಾನ ಆಗ್ತಾ ಬಂತು.ನೀನಿನ್ನೂ ಎಣ್ಣೆ ಹಚ್ಕಳ್ಲಲ..."ಎಂದು ಹುಸಿ ಮುನಿಸಿನಿಂದ ಅಪ್ಪ ಎಬ್ಬಿಸಿಲು ಪ್ರಯತ್ನಿಸುತ್ತಿದ್ದರು."ಹ್ಞಂ...ಸ್ವಲ್ಪ ಹೊತ್ತು.." ಅರೆ ನಿದ್ರೆಯಲ್ಲಿ ಮಾತು ಮುಂದುವರೆಯುವ ಮುನ್ನವೇ "ಏಳ್ತ್ಯಾ..ಇಲ್ವಾ..? " ಎಂಬ ಮಾತು ಕಿವಿಗೆ ಅಪ್ಪಳಿಸಿತು... "ಏಳ್ತೀನಿ... ಎದ್ದೆ.." ಎಂದು ಬಲಮಗ್ಗುಲಿಗೆ ಹೊರಳಿ ಕಣ್ಣುಬಿಟ್ಟೆ.ಚಿಕ್ಕಂದಿನಿಂದಲೂ  'ಅಪ್ಪಯ್ಯ'ನೆಂದೇ  ನನ್ನನ್ನು ಕರೆಯುತ್ತಿದ್ದ ಅಪ್ಪ ಒಮ್ಮೆ ಬೆಳಗ್ಗೆ ಬೇಗ ಏಳಲಿಲ್ಲವೆಂದು ಹೊಡೆದ ಪೆಟ್ಟಿನ ನೋವು ಜೀವಮಾನವಿಡೀ ನನ್ನ ಬೆಳಗಿನ ನಿದ್ದೆಯನ್ನು ತಿನ್ನುವಷ್ಟು ಶಕ್ತಿಶಾಲಿಯಾಗಿತ್ತು . ಹಾಗಾಗಿ ಅಪ್ಪ ಕರೆದ ತಕ್ಷಣ ಮರು ಮಾತಿಲ್ಲದೇ ಎದ್ದೆ.
               ನಿರೀಕ್ಷೆಯಂತೆ "ಬನ್ನಿ ಅಪ್ಪಯ್ಯ ಇಲ್ಲಿ..ಇವತ್ತು ನಾನು ಎಣ್ಣೆ ಹಚ್ತೀನಿ..." ಎಂದು ಮುದ್ದಾಗಿ ಅಪ್ಪ ಕರೆದಾಗ ಪುಳಕೋತ್ಸವ;ಪ್ರತೀ ಬಾರಿಯಂತೆಯೇ.ಹಾಗಾಗಿಯೇ ವರ್ಷವೂ ಅಭ್ಯಂಗಕ್ಕೆ ಕಾತರದಿಂದ ಕಾಯುತ್ತಿದ್ದುದು.ಶಾಲೆಗೆ ಹೋಗುವಾಗ ಅಮ್ಮನೇ ತಲೆಗೆ ಎಣ್ಣೆ ಹಾಕಿ,ಎಷ್ಟು ಪ್ರಯತ್ನ ಪಟ್ಟರೂ ನಿರ್ದಿಷ್ಟ ವಿನ್ಯಾಸಕ್ಕೆ ಬರಲೊಪ್ಪದ ಕೂದಲನ್ನು ಹೇಗೋ ಒಂದು ಸ್ಥಿತಿಗೆ ತಂದು ಕಳಿಸುತ್ತಿದ್ದಳು. ಹೀಗಾಗಿ ಅಪ್ಪ ಎಣ್ಣೆ ಹಾಕಿ ತಿಕ್ಕುತ್ತಿದ್ದ  ಸಂದರ್ಭಗಳೇ ವಿರಳ.ಅಭ್ಯಂಗದ ದಿನವನ್ನು ಬಿಟ್ಟು ಅವರು ಎಣ್ಣೆ ಹಾಕಿ ನನ್ನ ಮೈ-ಕೈ ತಿಕ್ಕವುದು ಎಲ್ಲಾದರೂ ಬಿದ್ದು ನೋವು ಮಾಡಿಕೊಂಡಾಗ ಮಾತ್ರ.ಕಾಲಾತೀತವಾಗಿ ಮನೆಯ ಅಂಗಳದಲ್ಲಿ ಯಾವಾಗಲೂ ಇರುತ್ತಿದ್ದ ಕಳೆಗೂ ನನ್ನ ಮೈಯಲ್ಲಿಯ ಗಾಯಕ್ಕೂ ನೇರ ಹೋಲಿಕೆ ಮಾಡಬಹುದಾಗಿತ್ತು.ಒಂದು ವೇಳೆ ಗಾಯವಿಲ್ಲದಿದ್ದರೂ ಸುಳ್ಳು ಹೇಳಿಯಾದರೂ ಮೈ- ಕೈ ತಿಕ್ಕಿಸಿಕೊಳ್ಳುತ್ತಿದ್ದೆ.ಆದರೆ ವರ್ಷಕ್ಕೊಮ್ಮೆ ಬರುವ 'ಎಣ್ಣೆ ಸ್ನಾನ'ದ ಮಜವೇ ಬೇರೆ.
               ಕಡೆಯುವ ಕಲ್ಲಿನ ಬುಡದಲ್ಲಿ ನನ್ನನ್ನು ಕೂರಿಸಿಕೊಂಡು ಅಪ್ಪ ಎಣ್ಣೆ ಹಾಕಿ ತಿಕ್ಕುತ್ತಿದ್ದರು.ಮಲೆನಾಡಿನ ಚಳಿಗೆ ಮರಗಟ್ಟಿ ಹೋಗುತ್ತಿದ್ದ ಕೈ-ಕಾಲುಗಳು ಅಪ್ಪನ ಸ್ಪರ್ಶಕ್ಕೆ ಮರಳಿ ಬಿಸಿಯಾಗುತ್ತಿದ್ದವು.ದೇಹದ ನೋವನ್ನೆಲ್ಲಾ ತಿಕ್ಕಿ ತೆಗೆದ ಅನುಭವವಾಗುತ್ತಿತ್ತು. "ಸಾಕೆನಾ..?" ಯಾವುದೋ ಭಾವದಲ್ಲಿ ತೇಲುತ್ತಿದ್ದ ನಾನು ವಾಸ್ತವಕ್ಕೆ ಇಳಿದೆ."ಇನ್ನೊಂಚೂರು ಹೊತ್ತು..." ಎಂಬ ರಾಗ ನನ್ನ ಬಾಯಿಂದ ತಾನಾಗಿಯೇ ಬಂತು. ಕೆಲ ನಿಮಿಷಗಳ ನಂತರ "ಸಾಕು ಕಣಾ...ಜಾಸ್ತಿ ತಿಕ್ಕಿದ್ರೆ ಮೈ-ಕೈ ಎಲ್ಲಾ ನೋವು ಬರುತ್ತೆ.ಅರ್ಧ ಗಂಟೆ ಬಿಟ್ಟು ಸ್ನಾನ ಮಾಡು...ಎಣ್ಣೆ ಎಲ್ಲಾ ಆರ್ಲಿ.ಸ್ವಲ್ಪ ತಿರುಕ್ಕೊಂಡು ಬಾ" ಎಂದಾಗ  ತುಂಡು ಪಂಚೆ ಸಿಕ್ಕಿಸಿಕೊಂಡು ಯಕ್ಷಗಾನದ ಪದ್ಯವನ್ನು ಗುನುಗಿಕೊಳ್ಳುತ್ತಾ ನಡೆದೆ;ಕಾಲುಗಳು ತಮ್ಮಷ್ಟಕ್ಕೆ ಹೆಜ್ಜೆ ಹಾಕಲು ಪ್ರಯತ್ನಿಸುತ್ತಿದ್ದವು.
               ಕಾವು ಪಡೆದ ದೇಹಕ್ಕೆ ನಿಧಾನವಾಗಿ ಚಳಿಯ ಅನುಭವವಾಗತೊಡಗಿತು.ಸೀದಾ ಅಡಿಕೆಯನ್ನು ಬೇಯಿಸುತ್ತಿದ್ದ ಒಲೆಯ ಬಳಿ ಹೋದೆ. ಸ್ವಲ್ಪ ಹೊತ್ತು ಚಳಿ ಕಾಯಿಸುತ್ತಾ ಕುಳಿತಿದ್ದೆ.ಇದ್ದಕ್ಕಿದ್ದಂತೆ 'ವಾಣಿ'ಯ ನೆನಪಾಯಿತು."ಪಾಪದ್ದು,ಇವತ್ತು ಅದ್ನ ಮಾತಾಡಿಸ್ಲೇ ಇಲ್ಲ.ಎಂತ ಮಾಡ್ತುಂಟೇನ..."ಎಂದು ಯೋಚಿಸುತ್ತಾ 'ಹಟ್ಟಿ'ಯ ಕಡೆ ನಡೆದೆ. ಕಾಲಾಡಲಿ ಎಂದು ಬಿಟ್ಟಿದ್ದ ಅದು ನಾನು ಹೋದೊಡನೆಯೇ ತನ್ನನ್ನು ಕಟ್ಟಲು ಬಂದರು ಎಂದು ಭಾವಿಸಿ ಹಟ್ಟಿಯ ತುಂಬಾ ಕುಣಿಯಲು ತೊಡಗಿತು.ಅಷ್ಟರಲ್ಲಿ ಅಮ್ಮ ಸ್ನಾನಕ್ಕೆ ಕರೆದರು.ಬಿಸಿ-ಬಿಸಿಯಾದ ನೀರಿಗೆ ಮೈಯನ್ನು ಒಡ್ಡಿಕೊಂಡು ಹೊರಗೆ ಬಂದು ಎಂದಿನಂತೆ ದೇವರಿಗೇ ನನ್ನ ದರ್ಶನವನ್ನು ತೋರಿ ತಿಂಡಿಗೆ ಹೋದೆ.
               ತಿಂಡಿ ಎನ್ನುವುದಕ್ಕಿಂತ ಊಟ ಎನ್ನವುದೇ ಸರಿ.ದೇವರಿಗೆ ಬೆಳಗ್ಗೆಯೇ ನೈವೇದ್ಯ ಆಗಿರುತ್ತಿದ್ದುದರಿಂದ ಪಾಯಸ ಇತ್ತು.ಒಂದು ವೇಳೆ ತಿಂಡಿಯೇ ಬೇಕೆಂದಾದಲ್ಲಿ ಇದ್ದುದು ಹಿಂದಿನ ದಿನದ ಚೀನೀಕಾಯಿ ಕಡುಬು.ಅದಕ್ಕಿಂತ ನನಗೆ ಪ್ರಿಯವಾದ,ಪಾಯಸದಲ್ಲಿ ಅನ್ನ ಕಲೆಸಿಕೊಂಡು ಊಟ ಮಾಡುವುದೇ ಉತ್ತಮವಾದದ್ದು ಎಂದು ಭಾವಿಸಿ ಹಾಗೆಯೇ ತಿಂದೆ.
                ಹೊಟ್ಟೆಗೋ ಏನೋ ಸ್ವಲ್ಪ ಬಿತ್ತು.ಆದರೆ ಅದನ್ನು ಕರಗಿಸಬೇಕಲ್ಲ..ಅದಕ್ಕೆ ಏನು ಕಿತಾಪತಿ ಮಾಡಬಹುದು ಎಂದು ಯೋಚಸಿದೆ.ಏನೂ ತೋಚಲಿಲ್ಲ. ಹಬ್ಬಕ್ಕೆಂದು ಮನೆಗೆ ಬಂದಿದ್ದ ನೆಂಟರು,ತಂಗಿಯರು ಹಾಗೂ ಅಣ್ಣನೊಂದಿಗಿನ ಆಟ-ಕಿತ್ತಾಟಗಳಲ್ಲಿ ಸಮಯ ಕಳೆದೆ. ಅದೂ  ಬೇಜಾರಾಗಲು ತೊಡಗಿತು.ಒಂದು ಆಲೋಚನೆ ಬಂತು.ಅಮ್ಮನ ಬಳಿ ಹೋಗಿ,"ಅಮ್ಮಾ , ಪಟಾಕಿ ಹೊಡೀಲಾ?" ಎಂದು ಕೇಳಿದೆ. "ದನಗಳು ಹೆದರಿಕೊಳ್ತಾವೆ,ಹಗಲಲ್ಲಿ ಕಾಣುದು ಬೇರೆ ಇಲ್ಲ.ರಾತ್ರಿ ಹೊಡಿ" ಎಂಬ ಸಿದ್ಧ ಉತ್ತರಬಂತು. ನಾನೂ ಮುಂಚೆಯೇ ಆಲೋಚಿಸಿದಂತೆ,"ಆಯ್ತಮ್ಮಾ,ಪಟಾಕಿ ಹೊಡೆಯಲ್ಲ.ನಾನು, ಅಣ್ಣ ದಿಂಡಿನ ಮರದ ಹತ್ರ ಕೇಪು ಹೊಡಿತೀವಿ.ಹಂಗೆ ಎಲ್ರನ್ನೂ ಕರ್ಕೊಂಡು ಹೋಗ್ತೀವಿ" ಎಂದು ಹೇಳಿ ತಂಗಿಯರನ್ನು ಕರೆದುಕೊಂಡು ಅಣ್ಣನೊಂದಿಗೆ  ಹೊರಟೆ."ಅಲ್ಲಿ ದರಗು , ಒಣ್ಗಿದ ಕಡ್ಡಿ ಎಲ್ಲಾ ಉಂಟು...ಹುಶಾರು ಮಾರಾಯಾ" ಎಂದು ಅಮ್ಮ ಹೇಳಿದ ಮಾತುಗಳೊಂದಿಗೆ "ಈ 'ಬಾಲೆ' ಒಂದು ...ಹೇಳಿದ್ದು ಕೇಳುಲ್ಲ" ಎನ್ನುವ ಅಜ್ಜಿಯ ಮಾತುಗಳಿಗೂ ಅಡುಗೆ ಮನೆಯ ಗೋಡೆಗಳೇ ಕಿವಿಯಾಗಿದ್ದವು.
                ಮನೆಯವರ ಆದೇಶದಂತೆ ಹಗಲಿನಲ್ಲಿ ಬರಿಯ ಕೇಪು ಹೊಡೆದೆವು.ಅದಕ್ಕಾಗಿ ಬಳಸಿದ್ದು ಸುತ್ತಿಗೆಯನ್ನ.ಕೋವಿಯಲ್ಲಿ ಜಾಸ್ತಿ ಶಬ್ಧ ಬರುವುದಿಲ್ಲ;ಸುತ್ತಿಗೆಯಲ್ಲಿ ಹೊಡೆದರೆ ಮಾತ್ರ ಕೇಪು ಜಾಸ್ತಿ ಶಬ್ಧ ಮಾಡುವುದೆಂಬುದು ನಮ್ಮ ನಂಬಿಕೆ. ಏನಾದರಾಗಲೀ..ಪಟಾಕಿ ಹೊಡೆದೇ ಬಿಡುವ ಎನ್ನುವ ಮನಸ್ಸು ಬಂದಿತಾದರೂ , ಈಗಲೇ ಹೊಡೆದದ್ಯಾಕೆ? ಎಂಬ ಕಾರಣವನ್ನಿಟ್ಟು ನಾಳೆಗೆ ಪಟಾಕಿ ಕೊಡದಿದ್ದರೆ ಕಷ್ಟ ಎಂದುಕೊಂಡು ಸುಮ್ಮನಾದೆವು.ಎಲ್ಲವನ್ನು ಮೀರಿ ಒಂದು ವೇಳೆ ಪಟಾಕಿ ಹೊಡೆಯುವುದಿದ್ದರೂ ಅಣ್ಣನೇ ಹೊಡೆಯಬೇಕು. ನಾನೋ ಪಟಾಕಿ ಹೊಡೆಯುವುದರಿಂದ ಸ್ವಲ್ಪ ದೂರ..ಅದರ ಬಗೆಗಿನ ಹೆದರಿಕೆಯೂ ಕಾರಣವಿರಬಹುದು.
               ಸೂರ್ಯನಿಗೆ ಆ ದಿನ ಬೇಸರ ಬಂದು ಮರೆಯಾಗುವವರೆಗೆ  ನಮ್ಮ ಪಯಣ ಸಾಗಿತು.ವಾಪಸ್ ಮನೆಗೆ ಬಂದೆವು.ಪಟಾಕಿಯನ್ನ ಅಣ್ಣನೇ ಹೊಡೆಯುವುದಾದರೂ ನಾನೂ ಇಡೀ ದೀಪಾವಳಿಯ ಸಂದರ್ಭದಲ್ಲಿ ಒಂದೆರಡು ಹೊಡೆಯುತ್ತಿದ್ದೆ.ಸಂಜೆ  ಪಟಾಕಿ ಹೊಡೆಯುವುದಕ್ಕೆ ದೀಪ ಹಚ್ಚುವವರೆಗೂ ಕಾಯಬೇಕು.ದೀಪ ಹಚ್ಚಿದ ನಂತರ ಸಂಜೆಯ  ತಂಪಾದ ಗಾಳಿಯೊಂದಿಗೆ ಒಂದೆರಡು ಪಟಾಕಿಯ ಸದ್ದು ವಾತಾವರಣವನ್ನು ಸೇರಿ ನೀರವತೆಯಲ್ಲಿ ಪ್ರತಿಧ್ವನಿಸಿತು.ಅಲ್ಲಿಗೆ ಅಂದಿನ ಹಬ್ಬ ಮುಗಿಯಿತು.
               'ನರಕ ಚತುರ್ದಶಿ' ಎಂದು ಹಬ್ಬದ ಹೆಸರಿದ್ದರೂ ಅದರ ಬಗೆಗಿನ ಆಚರಣೆಗಳು ಏನೂ ಇರದುದ್ದರಿಂದ ದೀಪಾವಳಿಯ ಎರಡನೇ ದಿನವೆಂದರೆ ನೆನಪಿಗೆ ಬರುವುದು ಎಣ್ಣೆ ಸ್ನಾನ ಮಾತ್ರ......
                 ವರುಷಗಳೆಷ್ಟೇ ಉರುಳಿದರೂ  ದೀಪಾವಳಿಯ ಈ ದಿನದ ಆಚರಣೆಗಳು ಸಣ್ಣ ವಯಸ್ಸಿನಿಂದಲೂ ಮೇಲಿನ ದಿನಚರಿಯಂತೆಯೇ....ಇದು ನನ್ನ ಪಾಲಿಗೆ ಬದಲಾಗಲೇ ಇಲ್ಲ ಹಾಗೆಯೇ ನನ್ನ ಸಂತೋಷ ಕೂಡಾ ಕಡಿಮೆಯಾಗಲೇ ಇಲ್ಲ ; ಇಮ್ಮಡಿಗೊಳ್ಳುತ್ತಲೇ ಇದೆ.
                ಆದರೆ ಊರ ಹೊರಗಿದ್ದು ಹಬ್ಬ ಆಚರಿಸುವ ಈ ಸಂದರ್ಭಗಳಲ್ಲಿ ಅಪ್ಪನ ಪ್ರೀತಿಯ ಮಾತುಗಳು,ಅಣ್ಣ-ತಂಗಿಯರೊಡನೆಯ ಆಟ-ಕಿತ್ತಾಟ,ಪಟಾಕಿಯ ಬಗೆಗಿನ ಹೆದರಿಕೆ,ದನ-ಕರುಗಳ ಒಡನಾಟ,ಮೈ ಮರಗಟ್ಟಿಸುವ ಚಳಿ,ಇಬ್ಬನಿ..ಇವುಗಳು  ಬಹುವಾಗಿ ಕಾಡತೊಡಗುತ್ತವೆ...

No comments:

Post a Comment